ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಗಂಭೀರವಾದ ಆರೋಪ ಪ್ರಕರಣವಾಗಿರುವುದರಿಂದ ಕೂಲಂಕಷವಾಗಿ ತನಿಖೆ ಮಾಡುತ್ತೇವೆ. ಸೂರಜ್ ರೇವಣ್ಣ ದಾಖಲಿಸಿರುವ ರಿಟರ್ನ್ ದೂರಿನ ಬಗ್ಗೆ ಸಹ ಪೊಲೀಸರು ತನಿಖೆ ಮಾಡುತ್ತಾರೆ ಎಂದರು.
ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಅವರು ಆದೇಶ ಹೊರಡಿಸಿದ್ದಾರೆ.
ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಸೂರಜ್ ರೇವಣ್ಣ ವಿರುದ್ಧದ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಈ ಸಂಬಂಧ ಅವರು ಹಾಸನ ಎಸ್ಪಿ, ಸಿಐಡಿ ಡಿಜಿಪಿಗೆ ಪತ್ರ ಬರೆದಿದ್ದಾರೆ. ಖುದ್ದು ಸಿಐಡಿ ಕಚೇರಿಗೆ ತೆರಳಿ ಕೇಸ್ ಫೈಲ್ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ತನಿಖೆಗೆ ತಯಾರಿ ಮಾಡಿಕೊಳ್ಳಲು ಸಿಐಡಿ ಅಧಿಕಾರಿಗಳಿಗೆ ಸಹ ಸೂಚಿಸಿದ್ದಾರೆ.
ಏನಿದು ಪ್ರಕರಣ : ಸೂರಜ್ ರೇವಣ್ಣ ಅವರು ಜೂನ್ 16ರ ರಾತ್ರಿ ತಮ್ಮ ಪಕ್ಷದ ಕಾರ್ಯಕರ್ತನಿಗೆ ಸಹಾಯ ಮಾಡುವುದಾಗಿ ಚನ್ನಪಟ್ಟಣ ತಾಲ್ಲೂಕಿನ ಗನ್ನಿಕಡದ ತೋಟದ ಮನೆಗೆ ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಜೆ.ಡಿ.ಎಸ್. ಕಾರ್ಯಕರ್ತರೊಬ್ಬರು ಆರೋಪಿಸಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಈಗಾಗಲೇ ಸೂರಜ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ: ಸೂರಜ್ ರೇವಣ್ಣ ಬಂಧನವಾದ ಕೂಡಲೇ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಬಿ.ಪಿ, ಶುಗರ್ ಮತ್ತು ಇತರ ಸಂಬಂಧಪಟ್ಟ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಹಾಸನದ ಸೆನ್ ಪೊಲೀಸ್ ಠಾಣೆಗೆ ಕರೆತರಲಾಗಿದೆ.
ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧನವಾಗಿ ವಿಚಾರಣೆ ನಡೆಯುತ್ತಿರುವ ನಡುವೆಯೇ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸೂರಜ್ ಬಂಧನವಾಗಿದೆ. ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಹಾಸನದಲ್ಲಿ ಸೂರಜ್‌ನನ್ನು ಬಂಧಿಸಲಾಗಿದೆ. ಇಂದು ಬೆಳಗ್ಗೆ ಸೂರಜ್ ರೇವಣ್ಣ ಸಾಕ್ಷಿ ನೀಡಲು ಠಾಣೆಗೆ ಬಂದ ವೇಳೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ತಮ್ಮ ಆಪ್ತ ಸಂತ್ರಸ್ತನ ವಿರುದ್ದ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಹಾಸನದ ಸೆನ್ ಪೊಲೀಸ್ ಠಾಣೆಗೆ ನಿನ್ನೆ ಸಂಜೆ 7.30ಕ್ಕೆ ಬಂದಿದ್ದ ಸೂರಜ್ ರೇವಣ್ಣನನ್ನು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು, ಸುದೀರ್ಘ ವಿಚಾರಣೆಗೊಳಪಡಿಸಿದರು. ರಾತ್ರಿ 10 ಗಂಟೆಗೆ ಸೂರಜ್ ರೇವಣ್ಣಗೆ ಊಟ ನೀಡಿದ ಬಳಿಕ ಇಂದು ಮುಂಜಾನೆ 4 ಗಂಟೆಯವರೆಗೂ ತನಿಖೆ ನಡೆಸಿ ನಂತರ ಮಲಗಲು ವ್ಯವಸ್ಥೆ ಮಾಡಿದ್ದರು. ಇದಾದ ಬಳಿಕ ಇಂದು ಬೆಳಗ್ಗೆ ಸೂರಜ್ ರೇವಣ್ಣ ಅವರನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದರು.


