ಕನ್ನಡ ಸಾಹಿತ್ಯ ಸಂಭ್ರಮ ವೇದಿಕೆಯಿಂದ ನವೆಂಬರ್ 24ರಂದು ಭಾನುವಾರ ಮೂಡಿಗೆರೆ ಪಟ್ಟಣದ ದೀನ ದಯಾಳ್ ಸಭಾ ಭವನದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಕವಿ ಕಾವ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಮೇಕನಗದ್ದೆ ಲಕ್ಷ್ಮಣಗೌಡ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಸಂಭ್ರಮ ವೇದಿಕೆ ರಾಜ್ಯಾಧ್ಯಕ್ಷ ಎಂ.ಎಸ್.ನಾಗರಾಜ್ ತಿಳಿಸಿದರು.
ಅಂದು ಬೆಳಿಗ್ಗೆ 9:30ಕ್ಕೆ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ ನಡೆಯಲಿದ್ದು, ಹಿರಿಯ ಸಾಹಿತಿ ಹಳೆಕೋಟೆ ರಮೇಶ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ನಂತರ ಸಮ್ಮೇಳನಾಧ್ಯಕ್ಷರ ಭಾಷಣ ನಡೆಯಲಿದೆ. ಚಲನಚಿತ್ರ ಸಂಗೀತ ನಿರ್ದೇಶಕ ಮಹೇಶ್ ಪ್ರಿಯದರ್ಶನ್ ಸಮ್ಮೇಳನದ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಶಾಸಕಿ ನಯನಾ ಮೋಟಮ್ಮ, ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಸೇರಿದಂತೆ ಅನೇಕ ಸಾಹಿತಿಗಳು ಹಿರಿಯರು ಕನ್ನಡ ನಾಡು, ನುಡಿ, ಸಾಹಿತ್ಯಕ್ಕಾಗಿ ದುಡಿದವರು ಭಾಗವಹಿಸಲಿದ್ದಾರೆ. ಎಂ.ಎಸ್.ನಾಗರಾಜ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗಭೂಮಿ ಕಲಾವಿದ ಉಪನ್ಯಾಸಕ ಎಚ್.ಎಂ ನಾಗರಾಜ ರಾವ್ ಕಲ್ಕಟ್ಟೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.
8 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ. ಚಲನಚಿತ್ರ ಹಿನ್ನೆಲೆ ಗಾಯಕ ಶೃತಿ ಪ್ರಿಯದರ್ಶನ್, ಜಾನಪದ ಗಾಯಕ ಬಕ್ಕಿ ರವೀಂದ್ರ ಅವರಿಗೆ ಕರುನಾಡ ಗಾನಸಿರಿ ಪ್ರಶಸ್ತಿ, ಕಿರುಚಿತ್ರ ನಿರ್ದೇಶಕ ನವೀನ್ ಆನೆದಿಬ್ಬ, ನೃತ್ಯ ನಿರ್ದೇಶಕ ಅಜಿತ್ ಕೆವಿಯಾರ್ ಅವರಿಗೆ ಮಲೆನಾಡು ಕಲಾಸಿರಿ ಪ್ರಶಸ್ತಿ, ಪತ್ರಕರ್ತ ಪ್ರಸನ್ನ ಗೌಡಳ್ಳಿ ಹಾಗೂ ವಿಜಯವಾಣಿ ವರದಿಗಾರ ಕಿರುಗುಂದ ಅಬ್ಬಾಸ್ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ, ಸಮಾಜ ಸೇವಕ ಅಬ್ದುಲ್ ರಹಿಮಾನ್ ಮತ್ತು ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮಾಸ್ಟರ್ ಪ್ರವೀಣ್ ಪೂಜಾರಿ ಅವರಿಗೆ ಕರುನಾಡ ಸೇವಾಸಿರಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 96 ಮಂದಿ ಕವಿಗಳು ಭಾಗವಹಿಸಲಿದ್ದಾರೆ. ಕವಿಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವನ ವಾಚಿಸಲಿದ್ದಾರೆ. ಕರುನಾಡ ಸಾಹಿತ್ಯ ಸಂಭ್ರಮ ವೇದಿಕೆಯಿಂದ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೆ ಹಲವಾರು ಕಡೆ ಕವಿಗೋಷ್ಠಿ ಸೇರಿದಂತೆ ಕನ್ನಡಪರವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಉದಯೋನ್ಮುಖ ಕವಿಗಳಿಗೆ ವೇದಿಕೆ ಒದಗಿಸಿ ಅವರ ಪ್ರತಿಭೆಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ಯುವ ಕೆಲಸದೊಂದಿಗೆ ಅತ್ಯುತ್ತಮ ಕವಿಗಳಿಗೆ ಪಂಪ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆ ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತದೆ. ಸಮಾಜ ಸೇವಕರು, ಸಾಹಿತಿಗಳು, ಕವಿಗಳು, ಕಾದಂಬರಿ ರಚನೆಕಾರರನ್ನು ಒಂದೆ ವೇದಿಕೆಯಲ್ಲಿ ಸೇರಿಸಿ ಸೌಹಾರ್ದತೆಯ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಹಸೈನಾರ್ ಬಿಳಗುಳ, ರಾಜಣ್ಣ, ಪ್ರಕಾಶ್, ಸದಾನಂದ, ರಮ್ಯಾಶ್ರೀ, ನವೀನ್ ಆನೆದಿಬ್ಬ, ಎಂ.ಬಿ.ವಿಜಯಲಕ್ಷ್ಮಿ, ವಿ.ಪಿ.ನಾರಾಯಣ, ತಾಲೂಕು ಕರವೇ ಅಧ್ಯಕ್ಷ ವಿನೋದ್ ಕುಮಾರ್ ಇತರರಿದ್ದರು.




