ಸರಕಾರಿ ಹಾಸ್ಟೆಲ್ಗಳ ಬಗ್ಗೆ ಮಾಜಿ ಸಚಿವ ಸಿ.ಟಿ.ರವಿ ನೀಡಿರುವ ಹೇಳಿಕೆ ಪೂರ್ವಗ್ರಹ ಪೀಡಿತವಾದ ಹೇಳಿಕೆಯಾಗಿದೆ. ಬಡ ಮಕ್ಕಳು ಸುಶಿಕ್ಷಿತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುವುದನ್ನು ಸಹಿಸದವರಿಂದ ಮಾತ್ರ ಇಂತಹ ಮಾತುಗಳನ್ನಾಡಲು ಸಾಧ್ಯ. ಸಿ.ಟಿ.ರವಿ ಹೇಳಿಕೆಯಿಂದಾಗಿ ಹಾಸ್ಟೆಲ್ ವ್ಯವಸ್ಥೆಯನ್ನೇ ಅನುಮಾನದಿಂದ ನೋಡುವಂತಾಗಿದ್ದು, ಹಾಸ್ಟೆಲ್ಗಳಲ್ಲಿ ನಕ್ಸಲರು ತಂಗುತ್ತಾರೆಂದು ಹೇಳಿರುವ ಸಿ.ಟಿ.ರವಿ ಅವರನ್ನು ಕೂಡಲೇ ಬಂಧಿಸಿ ತನಿಖೆಗೊಳಪಡಿಸಬೇಕು. ಈ ಹೇಳಿಕೆ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಆಗ್ರಹಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಈ ಬಿಜೆಪಿ ಸರಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿದ್ದರು. ಶಿಕ್ಷಣ ಸಚಿವರಾಗಿದ್ದ ಓರ್ವ ವ್ಯಕ್ತಿ ಬಡ ಮಕ್ಕಳು ಓದುತ್ತಿರುವ ಸರಕಾರಿ ಹಾಸ್ಟೆಲ್ಗಳ ಬಗ್ಗೆ ವಿವಾದ ಸೃಷ್ಟಿಯಾಗುವಂತಹ ಹೇಳಿಕೆ ನೀಡಿರುವುದು ವಿಪರ್ಯಾಸ. ಹಾಸ್ಟೆಲ್ಗಳು ಬಡ ಮಕ್ಕಳ ಶಿಕ್ಷಣಕ್ಕೆ ಹುಟ್ಟಿಕೊಂಡಿರುವ ವ್ಯವಸ್ಥೆಯಾಗಿದೆ. ಹಾಸ್ಟೆಲ್ಗಳಲ್ಲಿದ್ದುಕೊಂಡು ಶಿಕ್ಷಣ ಪಡೆದವರು ಉನ್ನತ ಸ್ಥಾನಕ್ಕೇರಿದ್ದಾರೆ. ಸಮಾಜದಲ್ಲಿ ಗೌರವದ ಸ್ಥಾನಮಾನಗಳನ್ನೂ ಪಡೆದುಕೊಳ್ಳುತ್ತಿದ್ದಾರೆಯೇ ಹೊರತು ನಕ್ಸಲೀಯರಾಗುವ ಉದ್ದೇಶದಿಂದ ಯಾರೊಬ್ಬರೂ ಹಾಸ್ಟೆಲ್ ಸೇರುತ್ತಿಲ್ಲ. ಕೆಲ ಯುವಕರು ನಕ್ಸಲ್ ಚಳವಳಿ ಸೇರಿದ್ದರೂ ಅದಕ್ಕೆ ಕಾರಣ ಸಿ.ಟಿ.ರವಿಯಂತಹ ರಾಜಕಾರಣಿಗಳ ಸೃಷ್ಟಿಸಿರುವ ಶೋಷಣೆ, ದಬ್ಬಾಳಿಕೆಯ ವ್ಯವಸ್ಥೆಯೇ ಆಗಿದೆಯೇ ಹೊರತು ಇದಕ್ಕೆ ಕಾರಣ ಹಾಸ್ಟೆಲ್ಗಳಲ್ಲ ಎಂದು ಅವರು ಹೇಳಿದ್ದಾರೆ.
20ವರ್ಷಗಳ ಕಾಲ ಸಿ.ಟಿ.ರವಿ ಶಾಸಕರಾಗಿದ್ದರು. ಈ ಅವಧಿಯಲ್ಲಿ ಎಂದೂ ಹಾಸ್ಟೆಲ್ಗಳ ಅವ್ಯವಸ್ಥೆಗಳ ಬಗ್ಗೆ ಮಾತನಾಡದ, ಹಾಸ್ಟೆಲ್ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸದ ಅವರಿಗೆ ದಿಢೀರ್ ಆಗಿ ಹಾಸ್ಟೆಲ್ಗಳು ಮತ್ತು ಅಲ್ಲಿನ ಮಕ್ಕಳ ಮೇಲೆ ಪ್ರೀತಿ ಬಂದಿರುವುದು ಏಕೆಂದು ತಿಳಿಯುತ್ತಿಲ್ಲ. ಹಾಸ್ಟೆಲ್ಗಳಲ್ಲಿ ನಕ್ಸಲರು ತಂಗುತ್ತಾರೆ, ನಕ್ಸಲ್ ವಿಚಾರಗಳನ್ನು ಅಲ್ಲಿನ ಮಕ್ಕಳ ತಲೆಗೆ ತುಂಬುತ್ತಾರೆ, ಹಾಸ್ಟೆಲ್ ವಿದ್ಯಾರ್ಥಿಗಳನ್ನು ನಕ್ಸಲ್ ಚಳವಳಿಗೆ ನೇಮಿಸಿಕೊಳ್ಳುತ್ತಾರೆಂದು ಸಿ.ಟಿ.ರವಿ ಹೇಳಿದ್ದು, ಅವರ ಹೇಳಿಕೆ ಗಮನಿಸಿದರೇ ಸಿ.ಟಿ.ರವಿಗೆ ನಕ್ಸಲರ ಬಗ್ಗೆ ಅಪಾರ ಮಾಹಿತಿ ಇದ್ದಂತಿದೆ. ಪೊಲೀಸ್ ಇಲಾಖೆ, ಸರಕಾರ ಸಿ.ಟಿ.ರವಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರೇ ನಕ್ಸಲರ ಬಗ್ಗೆ ಹೆಚ್ಚು ಮಾಹಿತಿ ತಿಳಿಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರಕಾರ ಮತ್ತು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತವಾಗಬೇಕು ಎಂದಿದ್ದಾರೆ.
ಸಿ.ಟಿ.ರವಿ ಹೇಳಿಕೆಯಿಂದಾಗಿ ಹಾಸ್ಟೆಲ್ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶೋಷಿತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಯೂ ಇರುವುದರಿಂದ ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳು ಸಿ.ಟಿ.ರವಿ ಹೇಳಿಕೆ ನಿಜವೋ, ಸುಳ್ಳೋ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು. ಈ ಮೂಲಕ ಹಾಸ್ಟೆಲ್ ಮಕ್ಕಳು ಮತ್ತು ಅವರ ಪೋಷಕರಲ್ಲಿರುವ ಆತಂಕ, ಗೊಂದಲವನ್ನು ಪರಿಹರಿಸಬೇಕು ಎಂದಿರುವ ಅವರು, ಜವಬ್ದಾರಿಯುತ ಸ್ಥಾನದಲ್ಲಿರುವ ಸಿ.ಟಿ.ರವಿ ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಬಹಿರಂಗವಾಗಿ ಬಾಯಿಗೆ ಬಂದಂತೆ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಸಮಾಜ ಒಡೆಯುವ, ಸಮಾಜದ ಸ್ವಾಸ್ಥö್ಯ ಹಾಳು ಮಾಡುವ ನಿಟ್ಟಿನಲ್ಲಿ ಸದಾ ತನ್ನ ನಾಲಗೆ ಹರಿ ಬಿಡುತ್ತಿದ್ದ ಸಿ.ಟಿ.ರವಿ ಈಗ ಹಾಸ್ಟೆಲ್ನಲ್ಲಿ ಓದುವ ಬಡವರ್ಗದವರ ಮಕ್ಕಳ ತಲೆ ಮೇಲೆ ನಕ್ಸಲ್ ಹಣೆ ಪಟ್ಟಿ ಕಟ್ಟುವ ಹುನ್ನಾರ ಮಾಡುತ್ತಿರುವುದನ್ನು ಎಲ್ಲರೂ ಪಕ್ಷಾತೀತವಾಗಿ ಖಂಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಿ.ಟಿ.ರವಿ ಓರ್ವ ಕೋಮುವಾದಿಯಾಗಿದ್ದು, ಆರೆಸೆಸ್, ಬಜರಂಗದಳದಂತಹ ಸಂಘಟನೆಗಳಿಗೆ ಅಮಾಯಕರಾದ ಶೋಷಿತ ಸಮುದಾಯಗಳ ಯುವಕರನ್ನು ಸೇರಿಸಿಕೊಂಡು ಅವರನ್ನು ಅನ್ಯಕೋಮಿನವರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದು ಗುಟ್ಟಾಗಿರುವ ಸಂಗತಿಯಲ್ಲ. ಆರೆಸೆಸ್, ಬಜರಂಗದಳದಂತಹ ಸಂಘಟನೆಗಳಲ್ಲಿ ಕೋಮುವಾದದ ಶಿಕ್ಷಣ ನೀಡಲಾಗುತ್ತಿದ್ದು, ಈ ಸಂಘಟನೆಗಳ ಯುವಕರು ಅನೇಕ ಕೋಮುಗಲಭೆ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗಿರುವುದು, ಯಾರದ್ದೋ ಧ್ವೇಷಕ್ಕೆ ಬಲಿಯಾಗಿರುವುದು, ಭವಿಷ್ಯವನ್ನೇ ಕಳೆದುಕೊಂಡಿರುವಂತಹ ಘಟನೆಗಳು ಸಾವಿರಾರಿದೆ. ಆದರೆ ಹಾಸ್ಟೆಲ್ಗಳಲ್ಲಿ ಓದಿದವರು ಸಮಾಜ ಘಾತುಕರಾದ ಉದಾಹರಣೆ ಇಲ್ಲ. ಸಿ.ಟಿ.ರವಿ ತಮ್ಮ ಹೇಳಿಕೆಗೆ ಕ್ಷಮೆಯಾಚನೆ ಮಾಡಬೇಕು. ಸರಕಾರ ಸಿ.ಟಿ.ರವಿ ಹೇಳಿಕೆ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.



