ಕಂದಾಯ ಇಲಾಖೆ ನಿರ್ಲಕ್ಷ್ಯದಿಂದ ಮೂರು ವರ್ಷಗಳಿಂದ 25 ಮನೆಗಳಿಗೆ ಹಕ್ಕುಪತ್ರ ನೀಡದೆ ವಿಳಂಬ ಮಾಡುತ್ತಿರುವುದಕ್ಕೆ ವಿರೋಧಿಸಿ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಹಾವಳಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ತಾನು ಪ್ರತಿನಿಧಿಸುತ್ತಿರುವ ಗ್ರಾಮದ ಜನರಿಗೆ ಮನೆ ಜಾಗದ ಹಕ್ಕುಪತ್ರ ನೀಡಲು ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರದ ವಿರುದ್ಧ ಅರೆಬೆತ್ತಲೆ ಪಾದಯಾತ್ರೆ ನಡೆಸಿದ ನವೀನ್, 25 ಮನೆಗಳ ಮಣ್ಣನ್ನು ಬುಟ್ಟಿಯಲ್ಲಿ ತುಂಬಿಕೊಂಡು ತಲೆಯ ಮೇಲೆ ಹೊತ್ತುಕೊಂಡು, ನಿಡುವಾಳೆಯಿಂದ ಮೂಡಿಗೆರೆ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿದ್ದಾರೆ.

ಪಾದಯಾತ್ರೆಯ ಮೂಲಕ ಮೂಡಿಗೆರೆ ತಾಲ್ಲೂಕು ಕಛೇರಿ ತಲುಪಿದ್ದು, ಗುರುವಾರ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ತಾನು ತಂದಿರುವ ನಿವೇಶನದ ಮಣ್ಣನ್ನು ಅವರಿಗೆ ನೀಡಿ ತನ್ನ ಪ್ರತಿಭಟನೆ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.
ಭೂಮಿಯ ಹಕ್ಕುಪತ್ರ ವಿತರಣಾ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಕಂದಾಯ ಇಲಾಖೆ ಸ್ಪಂದಿಸಿಲ್ಲ. 50ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರ ನೀಡಬೇಕಾಗಿದ್ದರೂ, ಕೇವಲ 25 ಮನೆಗಳಿಗೆ ಮಾತ್ರ ಮಂಜೂರು ಮಾಡಲಾಗಿದೆ. ಉಳಿದ ಮನೆಗಳಿಗೆ ಯಾಕೆ ಹಕ್ಕುಪತ್ರ ನೀಡಿಲ್ಲ? ಎಂಬ ಪ್ರಶ್ನೆ ಉದ್ಭವಿಸಿದೆ.
“ನಾನು ಹೊತ್ತು ತಂದಿರುವ ಮಣ್ಣಿನಲ್ಲಿ ಏನಾದರೂ ತೊಂದರೆ ಇದೆಯಾ? ಈ ಮಣ್ಣಿಗೆ ಹಕ್ಕುಪತ್ರ ಕೊಡಲು ಸಾಧ್ಯವೇ? ಇಲ್ಲವೇ?” ಎಂದು ನವೀನ್ ತಹಶೀಲ್ದಾರ್ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಲು ನಿರ್ಧರಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಸರ್ಕಾರದ ನಿರ್ಲಕ್ಷ್ಯತೆಯನ್ನು ಈ ಪ್ರತಿಭಟನೆಯ ಮೂಲಕ ಸಮಾಜಕ್ಕೆ ತಲುಪಿಸಲು ನವೀನ್ ಪ್ರಯತ್ನಿಸುತ್ತಿದ್ದಾರೆ. ಹಕ್ಕುಪತ್ರಕ್ಕಾಗಿ ಗ್ರಾಮಸ್ಥರ ಹೋರಾಟ ಮುಂದುವರಿಯಲಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಂಡು ತಕ್ಷಣ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.


