November 6, 2026
;
suddi-3

 

 

ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಬೌದ್ಧ ಧಮ್ಮದ ಮಾಜಿ ಜಿಲ್ಲಾ ಅಧ್ಯಕ್ಷರಾಗಿದ್ದ ಎಂ.ಎಸ್. ಅನಂತ್ ಅವರ ನಿಧನಕ್ಕೆ ಗುರುವಾರ ನಗರದ ಆಜಾದ್ ವೃತ್ತದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಬುದ್ಧ ವಂದನೆ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಅನಂತ್ ಅವರು ಬೌದ್ಧ ಧಮ್ಮದೊಂದಿಗೆ ಹೊಂದಿದ್ದ ನಂಟು ಹಾಗೂ ಅವರ ಸೇವೆಯನ್ನು ಸ್ಮರಿಸಿ, ಬೌದ್ಧ ಸಂಪ್ರದಾಯದಂತೆ ಬುದ್ಧ ವಂದನೆ ಸಲ್ಲಿಸಿ ಗೌರವ ಸೂಚಿಸಲು ನಿರ್ಧರಿಸಲಾಯಿತು. ಅದರಂತೆ ವಿವಿಧ ಸಂಘಟನೆಗಳ ಮುಖಂಡರು, ಅಂಬೇಡ್ಕರ್ ವಾದಿಗಳು, ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಬೌದ್ಧ ಧಮ್ಮದ ಅನುಯಾಯಿಗಳು ಸಭೆಯಲ್ಲಿ ಪಾಲ್ಗೊಂಡು ಗೌರವ ನಮನ ಸಲ್ಲಿಸಿದರು.

ಡಿ.ಎಸ್.ಎಸ್. ಮುಖಂಡ ವಸಂತ ಕುಮಾರ ಮಾತನಾಡಿ ಎಲ್ಲರೂ ಒಗ್ಗೂಡಿ ಅನಂತ್ ಅವರ ಸಾಮಾಜಿಕ ಹಾಗೂ ಧಾರ್ಮಿಕ ಒಡನಾಟವನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಅವರ ಅಂತಿಮ ದರ್ಶನ ಪಡೆಯಲು ಮೂಡಿಗೆರೆಗೆ ತೆರಳಿದರು. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಹೇಳಿದರು

ವ್ಯಕ್ತಿಯ ಬದುಕಿನಲ್ಲಿ ಆಸ್ತಿ, ಅಂತಸ್ತು ಹಾಗೂ ಅಧಿಕಾರಕ್ಕಿಂತ ಸಮಾಜದೊಂದಿಗೆ ಆತ ಹೊಂದಿದ್ದ ಸಂಪರ್ಕ, ಸ್ನೇಹ, ಪ್ರೀತಿ ಮತ್ತು ಸಲ್ಲಿಸಿದ ಸೇವೆ ಅತ್ಯಂತ ಮಹತ್ವದ್ದಾಗಿದೆ. ಸಮಾಜದ ಜನರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡು ಬದುಕಿದ ವ್ಯಕ್ತಿ ಅಗಲಿದಾಗ ಆತನ ನೆನಪುಗಳು ಸದಾ ಜೀವಂತವಾಗಿರುತ್ತವೆ ಎಂದು ಹೇಳಿದರು

ಒಬ್ಬ ವ್ಯಕ್ತಿ ಹೇಗೆ ಬದುಕಿದ್ದ, ಸಮಾಜದೊಂದಿಗೆ ಎಂತಹ ಸಂಬಂಧ ಹೊಂದಿದ್ದ ಮತ್ತು ಸಮಾಜಕ್ಕೆ ಯಾವ ರೀತಿಯ ಸೇವೆ ಸಲ್ಲಿಸಿದ್ದ ಎಂಬುದು ಆತನ ಬದುಕಿನ ನಿಜವಾದ ಮೌಲ್ಯವನ್ನು ನಿರ್ಧರಿಸುತ್ತದೆ. ಆಸ್ತಿ, ಅಂತಸ್ತು ನೀಡಲು ಸಾಧ್ಯವಾಗದಿದ್ದರೂ, ಇಂತಹ ಸಂದರ್ಭದಲ್ಲಿ ಅಗಲಿದ ವ್ಯಕ್ತಿಯನ್ನು ನೆನಪಿಸಿಕೊಂಡು ಕಣ್ಣೀರಿನ ನಮನ ಸಲ್ಲಿಸಿ, ಅವರ ಬದುಕಿನ ಉತ್ತಮ ಗುಣಗಳನ್ನು ಸ್ಮರಿಸುವುದೇ ನಾವು ನೀಡಬಹುದಾದ ಅತ್ಯಂತ ದೊಡ್ಡ ಗೌರವವಾಗಿದೆ. ಇಂತಹ ಕಾರ್ಯಕ್ರಮಗಳು ಅಗಲಿದ ವ್ಯಕ್ತಿಯ ಕುಟುಂಬದವರಿಗೆ ಹಾಗೂ ಅವರ ಆತ್ಮೀಯರಿಗೆ ಸಾಂತ್ವನ ನೀಡುವುದರ ಜೊತೆಗೆ, ಅವರು ಸಮಾಜದಲ್ಲಿ ಎಷ್ಟೊಂದು ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಿದ್ದರು ಎಂಬುದನ್ನು ತಿಳಿಸುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ವಾದಿ ಅಣ್ಣಯ್ಯ, ದಲಿತ ಸಂಘರ್ಷ ಸಮಿತಿಯ ಕಬ್ಬಗಿರೆ ಮೋಹನ್, ಧರ್ಮೇಶ್, ಜಯರಾಮಯ್ಯ, ಇಲಿಯಾಸ್ ಅಹಮದ್, ನಂಜುಂಡಪ್ಪ, ಭೀಮಯ್ಯ, ಸೊಸೈಟಿ ಅಧ್ಯಕ್ಷ ಪರಮೇಶ್, ಗಂಗಾಧರ, ಗೌತಮ ಬುದ್ಧ ಸಂಘದ ಜಿ.ಕೆ. ಬಸವರಾಜ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಬೌದ್ಧ ಧಮ್ಮದ ಪ್ರಚಾರಕರಾದ ಚಂದ್ರಪ್ಪ ಅವರು ಕೂಡ ಬುದ್ಧ ವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *