ಮೂಡಿಗೆರೆ ತಾಲ್ಲೂಕಿನ ಫಲ್ಗುಣಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಯುಎಸ್ಟಿ ಗ್ಲೋಬಲ್ ಫೌಂಡೇಶನ್ ವತಿಯಿಂದ ವಿವಿಧ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಬೆಂಚು, ಡೆಸ್ಕ್ ಗಳನ್ನು ಬುಧವಾರ ವಿತರಿಸಲಾಯಿತು.
ತಾಲ್ಲೂಕಿನ ಜಾವಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 15, ಬಗ್ಗಸಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 20 ಹಾಗೂ ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 4 ಸೇರದಂತೆ ಒಟ್ಟು 39 ಬೆಂಚು, ಡೆಸ್ಕ್ ಗಳು ಹಾಗೂ 3.70 ಲಕ್ಷ ಮೌಲ್ಯದ ವಿವಿಧ ಶಲಾ ಪರಿಕರಗಳನ್ನು ನೀಡಲಾಯಿತು.
ಪರಿಕರಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಫಲ್ಗುಣಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ, ʼಕಳೆದ ವರ್ಷದಿಂದಲೂ ಬೆಂಗಳೂರಿನ ಯುಎಸ್ಟಿ ಗ್ಲೋಬಲ್ ಫೌಂಡೇಶನ್ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ಬ್ಯಾಗ್, ನೋಟ್ ಪುಸ್ತಕ, ನಲಿಕಲಿ ಸಾಮಗ್ರಿಗಳು, ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್ ಸೇರಿದಂತೆ ವಿವಿಧ ಕಲಿಕಾ ಪರಿಕರಗಳನ್ನು ವಿತರಿಸಿದೆ. ಇದರಿಂದ ಸರ್ಕಾರಿ ಶಾಲೆಯಲ್ಲೂ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಸಿಗುವಂತಾಗಿದೆ. ಮಕ್ಕಳು ಉತ್ತಮ ಕಲಿಕೆಯನ್ನು ಗುರಿಯನ್ನಾಗಿಸಿಕೊಂಡು ಜ್ಞಾನಾರ್ಜನೆ ಮಾಡಬೇಕುʼ ಎಂದರು.
ಜಾವಳಿ ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣ ಮಾತನಾಡಿ, ʼಶಾಲೆಗೆ ಡೆಸ್ಕ್ ಗಳ ಅವಶ್ಯಕತೆಯಿತ್ತು. ಮಕ್ಕಳು ಖಾಸಗೀ ಶಾಲೆಗಳಂತೆ ಬೇಂಚು, ಡೆಸ್ಕ್ ಗಳನ್ನು ಬಳಸಿಕೊಂಡು ಕಲಿಕೆಯಲ್ಲಿ ತೊಡಗಲು ಸಹಕಾರಿಯಾಯಿತು. ಕೊಡುಗೆ ನೀಡಿದ ಯುಎಸ್ಟಿ ಗ್ಲೋಬಲ್ ಫೌಂಡೇಶನ್ ನ ಮನು, ಲತಾ ಹಾಗೂ ಚಂದ್ರಾವತಿ ಅವರ ಕೊಡುಗೆ ಕಾರ್ಯವು ಮುಂದುವರೆಯಲಿʼ ಎಂದರು.
ಗ್ರಾ.ಪಂ. ಮಾಜಿ ಸದಸ್ಯ ಪ್ರದೀಪ್, ಮುಖ್ಯ ಶಿಕ್ಷಕಿ ಗಂಗಮ್ಮ, ಯುಎಸ್ಟಿ ಗ್ಲೋಬಲ್ ಫೌಂಡೇಶನ್ ನ ಮನು, ಲತಾ ಪೋಷಕರು ಹಾಗೂ ವಿದ್ಯಾರ್ಥಿಗಳಿದ್ದರು.



