ಸಹ ವಕೀಲರ ಹತ್ಯೆಗಳನ್ನು ಖಂಡಿಸಿ, ವಕೀಲರಿಗೆ ಸೂಕ್ತ ಭದ್ರತೆ ಹಾಗೂ ಬಲವಾದ ಕಾನೂನು ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಮೂಡಿಗೆರೆ ನ್ಯಾಯಾಲದ ವಕೀಲರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ಮಂಜುನಾಥ್ ಮತ್ತು ಅನ್ನಪೂರ್ಣೇಶ್ವರಿ ನಗರದಲ್ಲಿ ಶ್ರೀರಾಮ್ ಎಂಬ ಇಬ್ಬರು ವಕೀಲರ ಹತ್ಯೆ ಹಾಗೂ ಗೌರಿಬಿದನೂರಿನಲ್ಲಿ ವಕೀಲ ವೆಂಕಟರಮಣ ಸನ್ನಕ್ಕಿ ಅವರ ಕೊಲೆಗೆ ಯತ್ನಿಸಿದ ಘಟನೆಗಳು ನಡೆದಿದ್ದು, ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮತ್ತು ಬೆಂಗಳೂರು ವಕೀಲರ ಸಂಘ (ಬಿಬಿಎ) ಜಂಟಿಯಾಗಿ ಪ್ರತಿಭಟನೆಗೆ ಕರೆ ನೀಡಿದ್ದವು.
ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಹತ್ಯೆ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ವೇಳೆ ಹಿರಿಯ ವಕೀಲ ಜಗದೀಶ್ ಅವರು ಮಾತನಾಡಿ ; ವಕೀಲರ ರಕ್ಷಣಾ ಕಾಯ್ದೆಯಲ್ಲಿ ಜಾಮೀನು ರಹಿತ ಕಠಿಣ ಸೆಕ್ಷನ್‌ಗಳನ್ನು ಸೇರಿಸಬೇಕು ಹಾಗೂ ಕನಿಷ್ಠ 10 ವರ್ಷಗಳ ಶಿಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.



