ನಾಳೆ ನವೆಂಬರ್ 6ರಂದು ಶುಕ್ರವಾರ ಮೂಡಿಗೆರೆ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಅಡ್ಯಂತಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿರುವ ಸಮ್ಮೇಳನಕ್ಕೆ ಮೂಡಿಗೆರೆ ಪಟ್ಟಣ ಸಜ್ಜುಗೊಂಡಿದೆ. ಪಟ್ಟಣದ ತುಂಬಾ ಕನ್ನಡ ಬಾವುಟ, ಬಂಟಿಗ್ಸ್, ಬ್ಯಾನರ್ ರಾರಾಜಿಸುತ್ತಿವೆ.
ತಾಲ್ಲೂಕಿನ ಹೆಸರಾಂತ ಸಾಹಿತಿ, ಶಾಸನ ಸಂಶೋಧಕ ಶ್ರೀ ಮೇಕನಗದ್ದೆ ಲಕ್ಷ್ಮಣಗೌಡ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.
ನವೆಂಬರ್ 6ರಂದು ಬೆಳಗ್ಗೆ 9 ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ, ಪರಿಷತ್ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
ಬಳಿಕ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ನೆರವೇರಿಸಲಿದ್ದಾರೆ. ಶಾಸಕಿ ನಯನಾ ಮೋಟಮ್ಮ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಲಕ್ಷ್ಮಣಕುಮಾರ್ ಸರ್ವರನ್ನು ಸ್ವಾಗತಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿ ಬಿಡುಗಡೆ ಮಾಡಲಿದ್ದಾರೆ. ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಆಶಯ ನುಡಿಗಳನ್ನು ಆಡಲಿದ್ದಾರೆ. ಕಸಾಪ ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಹೆಚ್.ಎಂ. ಶಾಂತಕುಮಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ನಂತರ ಸಮ್ಮೇಳನಾಧ್ಯಕ್ಷರಾದ ಮೇಕನಗದ್ದೆ ಲಕ್ಷ್ಮಣಗೌಡ ಸಮ್ಮೇಳನಾಧ್ಯಕ್ಷರ ಭಾಷಣ ನೆರವೇರಿಸಲಿದ್ದಾರೆ.
ಪ್ರಸ್ತುತ ಮಲೆನಾಡಿಗರ ಆತಂಕಕ್ಕೆ ಕಾರಣವಾಗಿರುವ ಕಸ್ತೂರಿ ರಂಗನ್ ವರದಿ ಬಗ್ಗೆ ವಿಚಾರಗೋಷ್ಠಿ ನಡೆಯಲಿದ್ದು, ಆ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ 50 ಪುಟದ ಕನ್ನಡ ಪುಸ್ತಕವೊಂದನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು. ನಂತರ ಸರಕಾರಿ ಶಾಲೆಗಳ ಅಳಿವು ಉಳಿವಿನ ಬಗ್ಗೆ ಗೋಷ್ಠಿ ನಡೆಯಲಿದೆ.
ವಿಚಾರಗೋಷ್ಠಿಯಲ್ಲಿ ಡಾ. ಪ್ರದೀಪ್ ಕೆಂಜಿಗೆ, ಅಧ್ಯಕ್ಷರು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಇವರು ಅಧ್ಯಕ್ಷತೆ ವಹಿಸಲಿದ್ದು, ಎಂ.ಪಿ. ಮನು ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಕಸ್ತೂರಿ ರಂಗನ್ ವರದಿ ಸಾಧಕ ಬಾಧಕಗಳ ಕುರಿತು ಶ್ರೀಮತಿ ನಿರ್ಮಲಾ ಗೌಡ, ಸಂಸ್ಥಾಪಕರು, ಪಾನಿ ಫೌಂಡೇಷನ್, ಬೆಂಗಳೂರು ,ಹೆಚ್.ಎ. ಕಿಶೋರ್ ಕುಮಾರ್, ಅಧ್ಯಕ್ಷರು, ಮಲೆನಾಡು ಜನಪರ ಹೋರಾಟ ಸಮಿತಿ, ಹಾಸನ ಇವರು ಮಾತನಾಡಲಿದ್ದಾರೆ.
ಸರ್ಕಾರಿ ಶಾಲೆಗಳ ಉಳಿವು ಮತ್ತು ಕನ್ನಡ ಭಾಷೆ ಕುರಿತು ಆರ್.ಪಿ. ವೆಂಕಟೇಶಮೂರ್ತಿ, ಹಿರಿಯ ಪತ್ರಕರ್ತರು, ಹಾಸನ, ಮೇಟಿಕೆರೆ ಹಿರಿಯಣ್ಣ, ಜಾನಪದ ತಜ್ಞರು ಹಾಗೂ ಸಾಹಿತಿ ಇವರು ವಿಷಯ ಮಂಡನೆ ಮಾಡಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರು ಐಡಿಎಸ್ಜಿ ಕಾಲೇಜು ಪ್ರಾಂಶುಪಾಲ ಎಚ್.ಎಂ.ಮಹೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತ್ಯ ಸಿರಿ, ಕನ್ನಡ ಸಿರಿ, ರೈತ ಸಿರಿ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ನಂತರ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಸಮ್ಮೇಳನಕ್ಕೆ ಕನ್ನಡಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ವತಿಯಿಂದ ಸರ್ವರನ್ನು ಸ್ವಾಗತಿಸಲಾಗಿದೆ.



