November 5, 2026
;
ctr 2

 

 

ರಾಜ್ಯದಲ್ಲಿ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ದೊಡ್ಡ ಕೊಡುಗೆ ನೀಡುತ್ತಿದ್ದೇವೆ ಎಂದು ಪ್ರಚಾರ ಮಾಡುತ್ತಿರುವ ಸರ್ಕಾರ, ಮತ್ತೊಂದೆಡೆ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ .ರವಿ ಟೀಸಿದ್ದಾರೆ.

ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ವರದಾನವಾಗುವ ಬದಲು ಶಾಪವಾಗಿ ಪರಿಣಮಿಸುತ್ತಿದೆ . ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿದ ಸರ್ಕಾರ, ಇದೀಗ ಬಸ್ ಪ್ರಯಾಣ ದರವನ್ನೂ ಏರಿಸುವ ಮೂಲಕ ಜನಸಾಮಾನ್ಯರಿಗೆ ಮತ್ತೊಂದು ಆರ್ಥಿಕ ಹೊರೆ ಹೊರಿಸಿದೆ ಎಂದು ಆರೋಪಿಸಿದ್ದಾರೆ.

ದಿನನಿತ್ಯ ಕೆಲಸಕ್ಕೆ ತೆರಳುವ ಉದ್ಯೋಗಿಗಳು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಜನರು ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸುವುದು ಅವರ ಮಾಸಿಕ ಖರ್ಚನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ ಎಂದಿದ್ದಾರೆ.

ಕಳೆದ ಮೂರೂವರೆ ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಹಾಲು, ಮೊಸರು, ತುಪ್ಪ, ಬೆಣ್ಣೆ ಸೇರಿದಂತೆ ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದಿಂದ ಇಂಧನದ ಹೊರೆ ಹೆಚ್ಚಾಗಿದೆ. ವಿದ್ಯುತ್ ದರ, ನೀರಿನ ದರ, ಮೆಟ್ರೋ ಪ್ರಯಾಣ ದರ, ಆಸ್ತಿ ತೆರಿಗೆ ಹಾಗೂ ವಿವಿಧ ಸರ್ಕಾರಿ ಸೇವೆಗಳ ಶುಲ್ಕಗಳಲ್ಲಿಯೂ ಏರಿಕೆಯಾಗಿದೆ ಎಂದು ಟೀಕಿಸಿದ್ದಾರೆ.

ಮದ್ಯದ ದರ ಮತ್ತು ಅಬಕಾರಿ ಸುಂಕದಿಂದ ಹಿಡಿದು ಕಟ್ಟಡ ನಿರ್ಮಾಣಕ್ಕೆ ಬೇಕಾದ ಮರಳು, ಎಂ-ಸ್ಯಾಂಡ್ ಮತ್ತು ಇತರ ಸಾಮಗ್ರಿಗಳ ವೆಚ್ಚದವರೆಗೂ ಏರಿಕೆಯ ಬಿಸಿ ತಟ್ಟಿದೆ ಎಂದು ತಿಳಿಸಿದ್ದಾರೆ.

ಇದರ ಪರಿಣಾಮ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಬಡವರು, ಮಧ್ಯಮ ವರ್ಗದ ಕುಟುಂಬಗಳು, ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಉದ್ಯಮಿಗಳು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವೂ ಬೆಲೆ ಏರಿಕೆಯ ಬಿಸಿಯನ್ನು ಎದುರಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ಪ್ರತಿಯೊಂದು ಕುಟುಂಬದ ಜೀವನ ನಿರ್ವಹಣೆಯನ್ನೇ ದುಬಾರಿಯಾಗಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 

 

Leave a Reply

Your email address will not be published. Required fields are marked *