ನವೆಂಬರ್ 7 ರಿಂದ ನಡೆಯಲಿರುವ ಪ್ರಸಿದ್ಧ ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತಾದಿಗಳ ಸುರಕ್ಷತೆ ಹಾಗೂ ಸುಗಮ ದರ್ಶನಕ್ಕೆ ಜಿಲ್ಲಾಡಳಿತದಿಂದ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.
ಅಧಿಕಾರಿಗಳ ತಂಡದೊಂದಿಗೆ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಟ್ಟ ಹತ್ತುವ ಮಾರ್ಗದಲ್ಲಿ ಭಕ್ತರ ಸುರಕ್ಷತೆಯ ಹಿತದೃಷ್ಟಿಯಿಂದ ಅಗ್ನಿಶಾಮಕ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ವತಿಯಿಂದ ’ಮಾಕ್ ಡ್ರಿಲ್’ ನಡೆಸಲಾಗಿದೆ ಎಂದು ಹೇಳಿದರು.
ಅಪಾಯಕಾರಿ ಹಾಗೂ ಜಾರುವ ಜಾಗಗಳಲ್ಲಿ ಹೊಸ ಹಗ್ಗಗಳನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಭಕ್ತರನ್ನು ಸುರಕ್ಷಿತವಾಗಿ ಕರೆತರಲು ಅಗ್ನಿಶಾಮಕ ಸಿಬ್ಬಂದಿಗೆ ಹೆಡ್‌ಟಾರ್ಚ್, ಸ್ಟ್ರೆಚರ್ ಹಾಗೂ ಹಾರ್ನೆಸ್ ಉಪಕರಣಗಳನ್ನು ಒದಗಿಸಲಾಗಿದೆ ಎಂದಿದ್ದಾರೆ.
ಬೆಟ್ಟದ ಮೇಲ್ಭಾಗದಲ್ಲಿ ತುರ್ತು ಚಿಕಿತ್ಸೆಗಾಗಿ ವೈದ್ಯಕೀಯ ತಂಡ ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿದೆ. ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಂವಹನಕ್ಕಾಗಿ ವಿಶೇಷ ವೈರ್‌ಲೆಸ್ ಸಾಧನಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನ. 7ರಂದು ಬೆಳಿಗ್ಗೆ 6ರಿಂದ ಪೂಜಾ ಕಾರ್ಯಗಳು ಆರಂಭಗೊಂಡು 10 ಗಂಟೆಗೆ ಮುಕ್ತಾಯಗೊಳ್ಳಲಿವೆ. ನಂತರ ಭಕ್ತರಿಗೆ ಬೆಟ್ಟ ಹತ್ತಲು ಅವಕಾಶ ನೀಡಲಾಗುವುದು. ನ. 7 ಮತ್ತು 8 ರಂದು ಎರಡು ದಿನಗಳ ಕಾಲ ದರ್ಶನಕ್ಕೆ ಅವಕಾಶವಿದೆ ಎಂದರು.
ರಾತ್ರಿ ವೇಳೆಯಲ್ಲಿ ಹೆಚ್ಚು ಅಪಾಯ ಇರುವುದರಿಂದ ರಾತ್ರಿ ಬೆಟ್ಟ ಹತ್ತಲು ಅವಕಾಶವಿಲ್ಲ. ಮಧ್ಯಾಹ್ನ ನಂತರ ಬರುವ ಭಕ್ತರಿಗೆ ಸಂಜೆ 4 ಗಂಟೆಯವರೆಗೆ ಮಾತ್ರ ಕೊನೆಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದರ್ ಕುಮಾರ್ ದಯಾಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಉಪ ವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ, ತಹಶೀಲ್ದಾರ್, ರೇಶ್ಮಾ ಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಜೊತೆಗಿದ್ದರು.


