November 3, 2026
;
hakkothaya_page-0001

 

 

ಶಿಶಿಲ-ಬೈರಾಪುರ ರಸ್ತೆ  ಅಭಿವೃದ್ಧಿ ಪಡಿಸಿ ಹಕ್ಕೋತ್ತಾಯ ಸಮಿತಿ, ಶಿಶಿಲ ಇದರ ವತಿಯಿಂದ ಸೋಮವಾರ ಬೆಳ್ತಂಗಡಿ ತಾಲ್ಲೂಕಿನ ಅರಸಿನಮಕ್ಕಿಯಲ್ಲಿ   ಬೃಹತ್ ಹಕ್ಕೋತ್ತಾಯ ಸಮಾವೇಶ ನಡೆಯಿತು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಅಭಿವೃದ್ಧಿಗೆ ವೇಗ ನೀಡಬೇಕು. ಈ ಭಾಗದ ಜನರ ಸಂಚಾರ, ಆರೋಗ್ಯ, ಕೃಷಿ ಹಾಗೂ ವ್ಯಾಪಾರ ವಹಿವಾಟಿಗೆ ಅನುಕೂಲ ಕಲ್ಪಿಸಬೇಕು ಎಂಬ ಒತ್ತಾಯ ಸಮಾವೇಶದಲ್ಲಿ ವ್ಯಕ್ತವಾಯಿತು.

ಸಮಾವೇಶಕ್ಕೂ ಮೊದಲು ಅರಸಿನಮಕ್ಕಿ ಪರಿಸರದ ಏಳು ಗ್ರಾಮಗಳ ಗ್ರಾಮಸ್ತರಿಂದ ಅರಸಿನಮಕ್ಕಿ ಆಟದ ಮೈದಾನದಿಂದ ಹಕ್ಕೊತ್ತಾಯ ಸಮಾವೇಶ ಸ್ಥಳದ ವರೆಗೆವಾಹನ ಜಾಥಾ ನಡೆಯಿತು.

ಜಾಥಾಗೆ ಚಾಲನೆ ನೀಡಿದ ಮಾಜಿ ಸಚಿವ ಹಾಗೂ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗಾಗಿ ಈ ಹಿಂದೆಯೂ ಸಾಕಷ್ಟು ಪ್ರಯತ್ನಗಳು ಹಾಗೂ ಹೋರಾಟಗಳು ನಡೆದಿವೆ. ರಸ್ತೆ ಅಭಿವೃದ್ಧಿಯ ಬೇಡಿಕೆಗೆ ಎಲ್ಲರೂ ಒಗ್ಗಟ್ಟಿನ ಧ್ವನಿ ನೀಡಬೇಕು ಎಂದು ಅವರು ಹೇಳಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ಜನರ ಒಗ್ಗಟ್ಟು ಮತ್ತು ಶಕ್ತಿಯನ್ನು ತೋರಿಸುವ ಮೂಲಕ ಶಿಶಿಲ-ಬೈರಾಪುರ ಭಾಗದ ಗ್ರಾಮಸ್ಥರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಹೋರಾಟ ರಸ್ತೆ ಅಭಿವೃದ್ಧಿಯ ಯಶಸ್ಸಿಗೆ ನಾಂದಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ ಗ್ರಾಮೀಣ ಜನರ ಕಷ್ಟಗಳನ್ನು ಪರಿಹರಿಸಲು ರಸ್ತೆ ಅಭಿವೃದ್ಧಿ ಅತ್ಯಗತ್ಯ. ಈ ರಸ್ತೆ ಮಲೆನಾಡು ಮತ್ತು ತುಳುನಾಡನ್ನು ಬೆಸೆಯುವ ಸಂಪರ್ಕ ಕೊಂಡಿಯಾಗಲಿದೆ ಎಂದು ತಿಳಿಸಿದರು.

ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ, ರಸ್ತೆ ಅಭಿವೃದ್ಧಿಗೊಂಡರೆ ಈ ಭಾಗದ ವ್ಯಾಪಾರ ವಹಿವಾಟು ವೃದ್ಧಿಯಾಗಲಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವೇಗ ದೊರೆಯುವುದರೊಂದಿಗೆ ಜನರ ಜೀವನಮಟ್ಟ ಸುಧಾರಿಸಲಿದೆ ಎಂದು ಹೇಳಿದರು.

ರಸ್ತೆ ಅಭಿವೃದ್ಧಿಪಡಿಸಿ ಹಕ್ಕೊತ್ತಾಯ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಜನಪ್ರತಿನಿದಿಗಳಿಗೆ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್. ನರಗುಂದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ನಿಡುವಾಳೆ ಚಂದ್ರು, ಬೆಳ್ತಂಗಡಿ ಸಿ.ಪಿ.ಐ.ಎಂ. ತಾಲೂಕು ಕಾರ್ಯದರ್ಶಿ ಬಿ.ಎಂ. ಭಟ್, ಕೆ.ಪಿ.ಸಿ.ಸಿ. ಜಿಲ್ಲಾ ಕಾರ್ಯದರ್ಶಿ ಎ.ಸಿ. ಮ್ಯಾಥ್ಯು, ಕರ್ನಾಟಕ ಗೃಹ ಮಂಡಳಿ ಮಾಜಿ ಅಧ್ಯಕ್ಷ ಜಿ.ಹೆಚ್. ಹಾಲಪ್ಪ ಗೌಡ, ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ, ಹಕ್ಕೋತ್ತಾಯ ಸಮಿತಿ ಕಾರ್ಯದರ್ಶಿಧರ್ಮರಾಜ್ ಗೌಡ ಅಡ್ಡಾಡಿ, ಚಿಕ್ಕಮಗಳೂರು ಕೆ.ಆರ್.ಆರ್.ಡಿ.ಎ. ನಿವೃತ್ತ ಎ.ಇ.ಇ. ಎಚ್.ಎಂ. ಶಿವಪ್ರಕಾಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ,  ಯೂತ್ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕೊಕ್ಕಡ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಮಾಜಿ ಅಧಕ್ಷ ನಾಗೇಶ್ ಕುಮಾರ್ ಗೌಡ, ಮೂಡಿಗೆರೆ ಕೆಂಪೇಗೌಡ ಒಕ್ಕಲಿಗ ವೇದಿಕೆ ಪ್ರಧಾನ ಕಾರ್ಯದರ್ಶಿ ಬಕ್ಕಿ ಪ್ರಸಾದ್, ತಾ.ಪಂ.ಮಾಜಿ.ಸದಸ್ಯ ವಾಮನ ತಮನ್ಮರ್, ಪ್ರಮುಖರಾದ ಜಯರಾಮ ನೆಲ್ಲಿತ್ತಾಯ, ಸಂಪತ್ ಬಿ.ಸುವರ್ಣ, ಕೊರಗಪ್ಪ ನಾಯ್ಕ, ಈಶ್ವರ ಬೈರಾ, ನವೀನ್ ನೆರಿಯ, ಎಸ್.ಎ.ವಾಸುದೇವ್, ನಚಿಕೇತ್, ಸಂತೋಷ್, ಮೋಯಿದ್ದೀನ್, ಸಮಿತ್ರೇ ಗೌಡ ಮತ್ತಿತರರು ಉಪಸ್ಥಿತರಿದ್ದರು.

ರಮೇಶ್ ಬೈರಕಟ್ಟೆ ಹಕ್ಕೋತ್ತಾಯ ವಿಷಯವನ್ನು ಪ್ರಾಸ್ತಪಿಸಿದರು. ಶಿಶಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಸಂದೀಪ್ ಶಿಶಿಲ ಸ್ವಾಗತಿಸಿ, ಹಕ್ಕೋತ್ತಾಯ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್ ವಂದಿಸಿ, ಪ್ರವೀಣ್ ಕುಲಾಲ್ ನಿರೂಪಿಸಿದರು.

ಸಮಾವೇಶಕ್ಕೆ ಮೂಡಿಗೆರೆ ತಾಲ್ಲೂ‍ಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಂದಲೂ ನೂರಾರು ಮಂದಿ ವಾಹನಗಳಲ್ಲಿ ತೆರಳಿದ್ದರು.

 

 

Leave a Reply

Your email address will not be published. Required fields are marked *