November 2, 2026
;
suddi-2

 

 

ಕ್ರೀಡಾ ಕ್ಷೇತ್ರದಲ್ಲಿ ಅಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಚಿಕ್ಕಮಗಳೂರು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ‘ಲೈಫ್‍ಲೈನ್ ಫೀಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ವತಿಯಿಂದ ಅದ್ಧೂರಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ನಗರದ ಆಜಾದ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಸಾಧಕರ ವಿಶೇಷ ಮೆರವಣಿಗೆ ನಡೆಯಿತು. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಕ್ರೀಡಾಭಿಮಾನಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿ ಕ್ರೀಡಾಪಟುಗಳ ಸಾಧನೆಯನ್ನು ಸಂಭ್ರಮಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ. ತಮ್ಮಯ್ಯ, “ಗೆಲುವು ಎನ್ನುವುದು ಒಂದೇ ದಿನದ ಸಾಧನೆಯಲ್ಲ; ಅದರ ಹಿಂದೆ ಹಲವು ವರ್ಷಗಳ ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಶಿಸ್ತು, ತ್ಯಾಗ ಮತ್ತು ದೃಢಸಂಕಲ್ಪ ಇರುತ್ತದೆ” ಎಂದರು. ಅಲ್ಲದೆ, ಜಿಲ್ಲೆಯ ಯಶಸ್ವಿ ಉದ್ಯಮಿಯಾದ ಲೈಫ್‍ಲೈನ್ ಫೀಡ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಕಿಶೋರ್ ಕುಮಾರ್ ಹೆಗಡೆ ಅವರು ಕೋಟಿ ರೂ. ಅಧಿಕ ಮೊತ್ತ ವೆಚ್ಚ ಮಾಡಿ ಕ್ರೀಡಾಪಟುಗಳು ಮತ್ತು ಮಾರ್ಗದರ್ಶಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು. ಚಿಕ್ಕಮಗಳೂರಿನ ಶತಮಾನೋತ್ಸವ ಅಥ್ಲೆಟಿಕ್ಸ್ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತೆ ರಕ್ಷಿತಾ ರಾಜು, ತಮ್ಮ ಕಣ್ಣೀರ ಕಥೆ ಹಾಗೂ ಹೋರಾಟವನ್ನು ಹಂಚಿಕೊಂಡರು. “2018ರ ಜಕಾರ್ತಾ ಹಾಗೂ 2023ರ ಚೀನಾ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದೆ. 2026ರ ಪ್ಯಾರಾ ಏಷ್ಯನ್ ಗೇಮ್ಸ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರೂ, ಉಡುಪಿನ ನಿಯಮದ ವಿವಾದದಿಂದ ಆ ಪದಕವನ್ನು ವಾಪಸ್ ಪಡೆಯಲಾಯಿತು. ಆ ನೋವನ್ನು ವರ್ಣಿಸಲು ಸಾಧ್ಯವಿಲ್ಲ. ಆದರೆ, ಆ ಕಷ್ಟದ ಸಮಯದಲ್ಲಿ ಕಿಶೋರ್ ಕುಮಾರ್ ಹೆಗಡೆ ಅವರು ದೂರವಾಣಿ ಮೂಲಕ ಧೈರ್ಯ ತುಂಬಿ, ‘ನೀನು ಸೋತಿಲ್ಲ, ಮುಂದಿನ ಗುರಿ ಚಿನ್ನವಾಗಿರಲಿ’ ಎಂದು ಪ್ರೋತ್ಸಾಹಿಸಿದರು. ಒಲಿಂಪಿಕ್ಸ್ ಪದಕ ಗೆಲ್ಲುವವರೆಗೂ ಕ್ರೀಡೆ ಬಿಡುವುದಿಲ್ಲ” ಎಂದು ದೃಢಸಂಕಲ್ಪ ವ್ಯಕ್ತಪಡಿಸಿದರು.

ಲೈಫ್‍ಲೈನ್ ಫೀಡ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಕಿಶೋರ್ ಕುಮಾರ್ ಹೆಗಡೆ ಮಾತನಾಡಿ, “ದೃಷ್ಟಿದೋಷವಿರುವ ಕ್ರೀಡಾಪಟುಗಳ ಜೊತೆ ವರ್ಷಪೂರ್ತಿ ಹೆಜ್ಜೆಹಾಕುವ ಗೈಡ್ ರನ್ನರ್‍ಗಳ ಹಾಗೂ ಕೋಚ್‍ಗಳ ಪಾತ್ರ ಅತ್ಯಂತ ಮಹತ್ವದ್ದು. ಸಾಧಕರಿಗೆ ಬಹುಮಾನ ನೀಡುವುದರ ಜೊತೆಗೆ ಗೈಡ್ ರನ್ನರ್‍ಗಳಿಗೂ ಪ್ರತ್ಯೇಕ ಪ್ರೋತ್ಸಾಹಧನ ನೀಡಲಾಗುತ್ತಿದ್ದು,   2028ರ ಅಮೆರಿಕ ಒಲಿಂಪಿಕ್ಸ್ ಗೆ ಸುಮಾರು 8 ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಗುರಿಯಿದ್ದು, ಬಡ ಕುಟುಂಬಗಳ 12 ರಿಂದ 14 ವರ್ಷದ ಮಕ್ಕಳಿಗೂ ಈಗಿನಿಂದಲೇ ತರಬೇತಿ ನೀಡಿ 2036ರ ಒಲಿಂಪಿಕ್ಸ್‍ಗೆ ಬೆಳೆಸುವ ಕನಸಿದೆ” ಎಂದರು.

ಕಾರ್ಯಕ್ರಮದಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತರಾದ ರಕ್ಷಿತಾ ರಾಜು, ರವಿ ರಂಗೇಗೌಡ, ರಾಧಾ ವೆಂಕಟೇಶ್ ಹಾಗೂ ರಮಣ್ ವಲಸನೈನ್ ಅವರನ್ನು ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮುಖ್ಯ ತರಬೇತುದಾರ ರಾಹುಲ್ ಬಾಲಕೃಷ್ಣ ಹಾಗೂ ಗೈಡ್ ರನ್ನರ್‍ಗಳನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಎಲ್ಟಿಐ ಸಂಸ್ಥೆಯ ನಿರ್ದೇಶಕ ಡಾ. ಸಿ.ಕೆ. ಸುಬ್ಬರಾಯ್, ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್, ಉಪಾಧ್ಯಕ್ಷ ಮಲ್ಲೇಶ್, ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್, ಮಾಜಿ ಸಚಿವ ಸಿ.ಟಿ. ರವಿ ಅವರ ಪುತ್ರ ಸಮರ್ಥ್ ಸೂರ್ಯ, ರಾಧಾ ಸುಂದರೇಶ್ ,ಸಂಸ್ಥೆಯ ನಿರ್ದೇಶಕರಾದ ನಂದನ್ ಹೆಗಡೆ, ಅರ್ಜುನ್ ಹೆಗಡೆ, ಸುಲೇಖ.ಕೆ ಹೆಗಡೆ, ಸೇರಿದಂತೆ ಹಲವು ಗಣ್ಯರು, ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *