November 3, 2026
;
suddi-8

 

 

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಪ್ರಜಾಸೇವೆ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿಯೊಂದು ಹೋಬಳಿ ಮಟ್ಟದಲ್ಲೂ ಈ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಚಿಕ್ಕಮಗಳೂರು ತಹಸೀಲ್ದಾರ್ ರೇಷ್ಮಾ ಶೆಟ್ಟಿ ತಿಳಿಸಿದರು.

ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ ಹೋಬಳಿಯ ಆಣೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ‘ಪ್ರಜಾಸೇವೆ ಆಂದೋಲನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಅರ್ಜಿ ಸಲ್ಲಿಸಲು ಆಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಕೌಂಟರ್‍ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ತಾಲೂಕು ಕಚೇರಿ ಅಥವಾ ವಿವಿಧ ಇಲಾಖೆಯ ಅಧಿಕಾರಿಗಳನ್ನು ಹುಡುಕಿಕೊಂಡು ದೂರದ ಊರುಗಳಿಂದ ಬಂದು ಅಲೆಯುವುದನ್ನು ತಪ್ಪಿಸಲು ಸರ್ಕಾರ ಈ ನೇರ ವೇದಿಕೆಯನ್ನು ಕಲ್ಪಿಸಿದೆ ಎಂದರು.

ಹಲವು ಸಭೆಗಳಲ್ಲಿ ಸಾರ್ವಜನಿಕರು ನೀಡುವ ಅರ್ಜಿಗಳಲ್ಲಿ ಸಹಿ ಇರುವುದಿಲ್ಲ ಅಥವಾ ಸರ್ವೇ ನಂಬರ್‍ಗಳಂತಹ ಅಗತ್ಯ ಪೂರ್ಣ ಮಾಹಿತಿಗಳು ಇರುವುದಿಲ್ಲ. ಇದರಿಂದ ಸಮಸ್ಯೆಯ ಶೀಘ್ರ ಪರಿಹಾರಕ್ಕೆ ತೊಡಕಾಗುತ್ತದೆ. ಹೀಗಾಗಿ ಸಾರ್ವಜನಿಕರು ತಮ್ಮ ಅರ್ಜಿಗಳಲ್ಲಿ ಸಂಪೂರ್ಣ ಮಾಹಿತಿ ಮತ್ತು ಸಹಿಯನ್ನು ಕಡ್ಡಾಯವಾಗಿ ನಮೂದಿಸಿ ಕೌಂಟರ್‍ಗಳಲ್ಲಿ ನೀಡಬೇಕು ಎಂದು ಮನವಿ ಮಾಡಿದರು.

ಸ್ಥಳದಲ್ಲೇ ನೊಂದಾಯಿತ ಅರ್ಜಿಗಳಲ್ಲಿ ಸಾಂಕೇತಿಕವಾಗಿ 10 ರಿಂದ 15 ಪ್ರಮುಖ ಅರ್ಜಿಗಳನ್ನು ವೇದಿಕೆಯಲ್ಲಿ ಪ್ರಸ್ತಾಪಿಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಕುಮಾರ್, ಆಲ್ದೂರು ವಲಯ ಆರ್.ಎಫ್.ಒ. ಪ್ರಮೋದ್, ಚಿಕ್ಕಮಗಳೂರು ಆರ.ಎಫ್.ಒ ಹರೀಶ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *