November 2, 2026
;
kannada 2

 

 

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಆಂತರಿಕವಾಗಿ ಮೂಡಿದಾಗ ಮಾತ್ರ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯವೆಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಅವರು ಭಾನುವಾರ ಮೂಡಿಗೆರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮಗಳಲ್ಲಿ ಗಣ್ಯರು ಭಾಷಣ ಮಾಡುವುದರ ಜತೆಗೆ ಪ್ರತಿಯೊಂದು ಶಾಲೆಯ ಓರ್ವ ವಿದ್ಯಾರ್ಥಿಗೆ ಮಾತನಾಡಲು ಅವಕಾಶ ನೀಡಬೇಕು. ಇದರಿಂದ ಇತರ ವಿದ್ಯಾರ್ಥಿಗಳಿಗೂ ಕನ್ನಡ ಭಾಷೆಯ ಮಹತ್ವ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೂಲಿ ಕೆಲಸಕ್ಕಾಗಿ ವಲಸೆ ಬಂದಿರುವ  ಬಾಂಗ್ಲಾ, ಅಸ್ಸಾಂ ಸೇರಿದಂತೆ ವಿವಿಧ ಭಾಗದಿಂದ ಬಂದಿರುವ ಕಾರ್ಮಿಕರೊಂದಿಗೆ ನಾವು ಹಿಂದಿ ಅಥವಾ ಇತರ ಭಾಷೆ ಬಳಸದೇ ಕನ್ನಡದಲ್ಲೇ ಮಾತನಾಡಬೇಕು. ಆಗ ಮಾತ್ರ  ಪರಭಾಷಿಕರು ಕನ್ನಡ ಕಲಿಯಲು ಆಸಕ್ತಿ ತೋರುತ್ತಾರೆ. ಅಲ್ಲದೇ ಶಾಲಾ ಮಕ್ಕಳ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಅನಗತ್ಯವಾಗಿ ಆಂಗ್ಲ ಭಾಷೆ ಬಳಕೆ ಕಡಿಮೆ ಮಾಡುವ ಮೂಲಕ ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಿದಾಗ ಕನ್ನಡ ಭಾಷೆ ಉಳಿಸಲು ಸಾಧ್ಯವೆಂದು ಹೇಳಿದರು.

ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‍ಗೌಡ ಮಾತನಾಡಿ, ಅಪ್ಪ, ಅಮ್ಮ, ಅಜ್ಜ, ಅಜ್ಜಿ ಸೇರಿದಂತೆ ಕುಟುಂಬದ ಸದಸ್ಯರನ್ನು ಕನ್ನಡದ ಸಂಬಂಧ ಪದಗಳಿಂದ ಕರೆಯುವ ಸಂಪ್ರದಾಯ ಮರೆಯಾಗುತ್ತಿದೆ. ಪಥಸಂಚಲನದಲ್ಲಿ  ಬಾಗಿಯಾಗಿದ್ದ ಕೆಲ ಖಾಸಗಿ ಶಾಲೆಗಳು ತಮ್ಮ ಶಾಲೆ ಹೆಸರನ್ನು ಬಾವುಟದಲ್ಲಿ ಆಂಗ್ಲ ಭಾಷೆ ಬಳಸಿರುವುದು ಖಂಡನೀಯ. ಇಂತಹ ಬೆಳವಣಿಗೆ ನಡುವೆ ಕನ್ನಡ ಉಳಿಸಿ ಬೆಳೆಸಲು ಹೇಗೆ ಸಾಧ್ಯ? ಇದು ಮತ್ತೆ ಮರುಕಳಿಸಬಾರದು. ಕನ್ನಡ ಭಾಷೆ ಉಳಿವು ಮನೆ ಮತ್ತು ಶಾಲೆಗಳಿಂದಲೇ ಆಗಬೇಕಿದೆ ಎಂದು ಹೇಳಿದರು.

ರಾಷ್ಟ್ರಧ್ವಜಾರೋಹಣವನ್ನು ತಹಸೀಲ್ದಾರ್ ಎಸ್.ಅಶ್ವಿನಿ ನೆರವೇರಿಸಿದರು.

ಈ ಸಂದರ್ಭದಲ್ಲಿ  ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಸಿ.ಬಿ.ಶಂಕರ್, ಕೆಡಿಪಿ ಸದಸ್ಯರಾದ ರವಿ ಕುನ್ನಳ್ಳಿ, ಅಶ್ವತ್ ಮಾಕೋನಹಳ್ಳಿ, ಸಂಪತ್‍ಕುಮಾರ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಮಂಜಪ್ಪ. ತಾ.ಪಂ. ಇಒ ದಯಾವತಿ, ಸಿಪಿಐ ರಾಜಶೇಖರ್, ಬಿಇಒ ಮೀನಾಕ್ಷಿ, ವಿವಿಧ ಸಂಘ ಸಂಸ್ಥೆ ಮುಖಂಡರಾದ ಮಂಜುನಾಥ್ ಬೆಟ್ಟಗೆರೆ, ಬಕ್ಕಿ ಪ್ರಸಾಧ್, ಪುಟ್ಟಸ್ವಾಮಿಗೌಡ, ಲೋಕೇಶ್ ಬೆಟ್ಟಗೆರೆ, ಯು.ಬಿ.ನಾಗೇಶ್, ನವೀನ್ ಆನೆದಿಬ್ಬ, ಸೋಮೇಶ್ ಮತ್ತಿತರರಿದ್ದರು.

ಇದೇ ಸಂದರ್ಭದಲ್ಲಿ ಕನ್ನಡ ಕಾರ್ಯಕ್ರಮವನ್ನು ರಾಜಕೀಯಗೊಳಿಸಲಾಗುತ್ತಿದೆ. ಸಂಘ ಸಂಸ್ಥೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಕೆಲವು ಸಂಘಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ಏರ್ಪಟ್ಟಿತು.

 

 

Leave a Reply

Your email address will not be published. Required fields are marked *