ಸಾರ್ವಜನಿಕ ಸೇವೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಸಂವಿದಾನದ ನಾಲ್ಕನೇ ಅಂಗವೆಂದೇ ಕರೆಯಲ್ಪಡುವ ಮಾಧ್ಯಮ ರಂಗದಲ್ಲಿ ಕೆಲಸ ಮಾಡುವ ಪತ್ರಕರ್ತರು ಸಮಾಜದ ಸುವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದು ಚಿಕ್ಕಮಗಳೂರು ದರ್ಪಣ ಪತ್ರಿಕೆ ಸಂಪಾದಕ ಪ್ರಸನ್ನ ಗೌಡಹಳ್ಳಿ ಅಭಿಪ್ರಾಯಿಸಿದರು.
ಅವರು ಸೋಮವಾರ ಮೂಡಿಗೆರೆ ತಾಲ್ಲೂಕು ಗೋಣಿಬೀಡು ರೋಟರಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸಂಸ್ಥೆಯ ಮಾಸಿಕ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸೇವೆಯಲ್ಲಿ ಪತ್ರಕರ್ತರ ಪಾತ್ರ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಆಡಳಿತ ಗಮನಕ್ಕೆ ತರುವುದರಲ್ಲಿ, ಸಮಾಜದ ಶೋಷಿತರ, ಬಡವರ ಸಮಸ್ಯೆಗಳನ್ನು ಪ್ರತಿಬಿಂಬಿಸುವಲ್ಲಿ ಪತ್ರಕರ್ತರು ಅಪಾರ ಕೊಡುಗೆ ನೀಡುತ್ತಿದ್ದಾರೆ. ಸಮಾಜದಲ್ಲಿ ಅತಿರೇಕಗಳು ನಡೆದಾಗ ಅದನ್ನು ಬೆಳಕಿಗೆ ತರುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ, ಆಡಳಿತ ಹಳಿ ತಪ್ಪಿದಾಗ ಎಚ್ಚರಿಸುವ ಮೂಲಕ ಪ್ರಜಾಪ್ರಭುತ್ವದ ಸುಗಮ ನಿರ್ವಹಣೆಯಲ್ಲಿ, ಭಾಷೆ, ನೆಲ ಜಲ ವಿಚಾರಗಳು ಬಂದಾಗ ತಮ್ಮ ಲೇಖನಗಳ ಮೂಲಕ ಪತ್ರಕರ್ತರು ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದರು.
ಕಳೆದ ಎರಡು ದಶಕಗಳಿಂದ ಮಾಧ್ಯಮಗಳ ಸ್ವರೂಪ ಬದಲಾಗಿದ್ದು, ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತರು ಹೆಚ್ಚು ಒತ್ತಡ ಮತ್ತು ಸ್ಪರ್ಧಾತ್ಮಕತೆಯನ್ನು ಎದುರಿಸುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯಕ್ಕಾಗಿ ಸಮಯದ ಮಿತಿಯಿಲ್ಲದೇ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದು, ಸ್ವತಂತ್ರ ಮತ್ತು ನಿಷ್ಪಾಕ್ಷಪಾತ ಪತ್ರಿಕೋದ್ಯಮಕ್ಕೆ ಸಮಾಜದ ಬೆಂಬಲವು ಅಗತ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಣಬೀಡು ರೋಟರಿ ಅಧ್ಯಕ್ಷ ನಯನ್ ವಹಿಸಿದ್ದರು. ಕಾರ್ಯದರ್ಶಿ ವಿನರ್ ಸ್ವಾಗತಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


