ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೇಸ್ ಯುವ ಮುಖಂಡರಾಗಿದ್ದ ಎಂ.ಎಸ್. ಅನಂತ್ (52 ವರ್ಷ) ಅವರು ಅನಾರೋಗ್ಯದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅನಂತ್ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ನವೆಂಬರ್ 4 ಬುಧವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಮಾಜಿ ಸಚಿವೆ ಶ್ರೀಮತಿ ಮೋಟಮ್ಮನವರ ಅಣ್ಣನ ಮಗನಾಗಿದ್ದ ಅನಂತ್ ಇಂಜಿನಿಯರ್ ಪದವೀದರರಾಗಿದ್ದರು. ಪದವಿ ನಂತರ ಮೋಟಮ್ಮನವರ ಮಾರ್ಗದರ್ಶನದಲ್ಲಿ ರಾಜಕೀಯ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.
ಒಂದು ಬಾರಿ ಮೂಡಿಗೆರೆ ಕಸಬಾ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಕಾಂಗ್ರೇಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಪಕ್ಷದ ಜಿಲ್ಲಾ ವಕ್ತಾರ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ವಿವಿಧ ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಉಸ್ತುವಾರಿಯಾಗಿಯುವ ಅವರು ಕೆಲಸ ಮಾಡಿದ್ದರು.
ಬಹಳ ಸಮಯದಿಂದ ಮೋಟಮ್ಮನವರ ಮಾಲೀಕತ್ವದ ಶ್ರೀ ವೆಂಕಟೇಶ್ವರ ಗ್ಯಾಸ್ ಏಜೆನ್ಸಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮೋಟಮ್ಮನವರ ನೇತೃತ್ವದ ಆಶ್ರಯ ಸಾಮಾಜಿಕ ಸಂಸ್ಥೆಯ ನಿರ್ದೇಶಕರಾಗಿ ಮೂಡಿಗೆರೆಯಲ್ಲಿ ನಡೆಯುವ ಸರಳ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿದ್ದರು.
ಕೋವಿಡ್ ಸಂದರ್ಭದಲ್ಲಿ ಕೊರೋನಾದಿಂದ ತೀವ್ರ ಶ್ವಾಸಕೋಸದ ಸೋಂಕಿಗೆ ತುತ್ತಾಗಿದ್ದ ಅನಂತ್ ಅವರು ಸಾವನ್ನು ಗೆದ್ದು ಬಂದಿದ್ದರು. ಅದರೆ ಕಳೆದ ತಿಂಗಳು ಹಠಾತ್ತನೆ ಕುಸಿದು ಬಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಅವರಿಗೆ ಮತ್ತೊಮ್ಮೆ ಶ್ವಾಸಕೋಸದ ತೀವ್ರ ಸೋಂಕು ಮರುಕಳಿಸಿದೆ ಎಂದು ವೈದ್ಯರು ತಿಳಿಸಿದ್ದರು. ಚಿಕ್ಕಮಗಳೂರು ಸ್ಪಂದನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಇದ್ದಾಗ ಅಕ್ಟೋಬರ್ 17 ರಂದು ಬೆಂಗಳೂರಿನ ಮಣಿಪಾಲ್ ವಿಕ್ರಂ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ.
ಮೃತರ ಪಾರ್ಥಿವ ಶರೀರ ಇಂದು ಬುಧವಾರ ಮಧ್ಯಾಹ್ನ 12 ಗಂಟೆಯ ಸಮಯಕ್ಕೆ ಮೂಡಿಗೆರೆ ತಲುಪಲಿದ್ದು, ಕೆಲ ಕಾಲ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ, ಸಂಜೆ ಮಗ್ಗಲಮಕ್ಕಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಬ ಮೂಲಗಳು ತಿಳಿಸಿವೆ.
ಮೃತ ಅನಂತ್ ಅವರು ಪತ್ನಿ, ಇಬ್ಬರು ಪುತ್ರಿಯರು, ಅಪಾರ ಬಂಧುಗಳು, ಸ್ನೇಹಬಳಗವನ್ನು ಅಗಲಿದ್ದಾರೆ. ಅವರ ಅಕಾಲಿಕ ಅಗಲಿಕೆಗೆ ಮೂಡಿಗೆರೆ ಜನ ಕಂಬನಿ ಮಿಡಿದಿದ್ದಾರೆ.


