ಮೂಡಿಗೆರೆ ತಾಲೂಕಿನ ನಂದೀಪುರ ಸಮೀಪದ ಗೌರಿಕೆರೆ ಗ್ರಾಮದ 18 ವರ್ಷದ ನವೀನ್ ಎಂಬ ಯುವಕನ ಅನುಮಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸ್ಥಳೀಯ ಯುವಕರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸ್ ಎಫ್ಐಆರ್ನಲ್ಲಿರುವ ಮಾಹಿತಿಯ ಪ್ರಕಾರ, ಮೃತ ನವೀನ್ ನಂದಿಪುರ, ಗೌರಿಕೆರೆ ಗ್ರಾಮದ ನಿವಾಸಿಯಾಗಿದ್ದು, ಪ್ರಕರಣದಲ್ಲಿ ಚೇತನ್ (21), ಭರತ್ (26), ಪ್ರೀತಂ (21) ಹಾಗೂ ಆನಂದ (27) ಎಂಬ ನಾಲ್ವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಮೃತ ಯುವಕ ನವೀನ್ ಅವರ ತಂದೆ ಕುಮಾರ್ ಈ ಸಂಬಂಧ ಮೂಡಿಗೆರೆ ಠಾಣೆ ದೂರು ನೀಡಿದ್ದು, ಅವರು ತಮ್ಮ ದೂರಿನಲ್ಲಿ ನನ್ನ ಮಗನನ್ನು ಗ್ರಾಮದ ಚೇತನ್, ಭರತ್, ಪ್ರೀತಂ, ಆನಂದ ಇವರು ಅಕ್ಟೋಬರ್ 28ರಂದು ಬಲವಂತವಾಗಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಏರ್ ಗನ್ ನಿಂದ ಹೊಡೆದಿದ್ದಾರೆ. ನಂತರ ಅವರೇ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೊದಲು ಮೂಡಿಗೆರೆ ನಂತರ ಹಾಸನ ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ನನ್ನ ಬಳಿ ನಿಮ್ಮ ಮಗನಿಗೆ ದನ ಗುದ್ದಿ ಗಾಯವಾಗಿದೆ ಎಂದು ಸುಳ್ಳು ಹೇಳಿದ್ದರು. ಇದೀಗ ನನ್ನ ಮಗ ಸಾವನ್ನಪ್ಪಿದ್ದು, ನನ್ನ ಮಗನನ್ನು ಕೊಲೆ ಮಾಡಲಾಗಿದೆ. ಕೊಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಠಾಣೆಗೆ ದೂರು ನೀಡಿದ್ದಾರೆ.
ಕರ್ನಾಟಕದ ಭಾರತೀಯ ನ್ಯಾಯ ಸಂಹಿತೆಯ ಕಲಂ 103(1) ಹಾಗೂ 3(5) ಅಡಿಯಲ್ಲಿ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಫ್ಐಆರ್ನಲ್ಲಿ 2026ರ ಅಕ್ಟೋಬರ್ 28ರ ಘಟನೆಗೆ ಸಂಬಂಧಿಸಿದ ವಿವರಗಳಿದ್ದು, ನವೆಂಬರ್ 3ರಂದು ರಾತ್ರಿ ಸುಮಾರು 10.30ರ ವೇಳೆಗೆ ದೂರು ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಯುವಕನ ಸಾವಿಗೆ ನಿಖರ ಕಾರಣವೇನು? ಘಟನೆಗೆ ಕಾರಣವಾದ ಹಿನ್ನೆಲೆ ಏನು? ಆರೋಪಿಗಳ ಪಾತ್ರವೇನು? ಎಂಬ ಸಂಪೂರ್ಣ ಸತ್ಯಾಂಶಗಳು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.


