October 22, 2026
;
cyber 2 copy

 

 

ಚಿಕ್ಕಮಗಳೂರು ನಗರದಲ್ಲಿ ಮಂಗಳವಾರ ಮಧುವನ ಬಡಾವಣೆ ಸೇರಿದಂತೆ ಕೆಲವೆಡೆ ಸೈಬರ್ ವಂಚನೆ ಮಾಡುವ ಯತ್ನ ನಡೆದಿದೆ. ಕೊರಿಯರ್ ಮೂಲಕ ವಸ್ತು ಬಂದಿದೆ ಎಂದು ದೂರವಾಣಿ ಮೂಲಕ ತಿಳಿಸುವ ನೆಪದಲ್ಲಿ ಬ್ಯಾಂಕಿನಲ್ಲಿರುವ ಹಣ ಹೊಡೆಯಲು ಮುಂದಾಗಿದ್ದು, ಈ ಬಗ್ಗೆ ಸೈಬರ್ ಪೊಲೀಸರಿಗೂ ದೂರು ಸಲ್ಲಿಸಲಾಗಿದೆ.

ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಕೊರಿಯರ್ ಸರ್ವಿಸ್ ಎಂದು ಹೇಳಿ ವಂಚಕನೋರ್ವ 9204995564 ಸಂಖ್ಯೆಯಿಂದ ಮೊಬೈಲ್ ಮೂಲಕ ದೂರವಾಣಿ ಮಾಡಿ `ನಿಮಗೆ ಕೊರಿಯರ್‍ನಲ್ಲಿ ವಸ್ತುಗಳು ಬಂದಿವೆ. ನಮ್ಮ ಡೆಲಿವರಿ ಬಾಯ್ ಕರೆ ಮಾಡಿದರೆ ನಿಮ್ಮ ದೂರವಾಣಿಗೆ ಹೋಗುತ್ತಿಲ್ಲ. ಹಾಗಾಗಿ ಅವನ ನಂಬರ್ ನೀಡುತ್ತೇನೆ. ನೀವೇ ಕರೆ ಮಾಡಿ ಅವನಿಗೆ ವಿಳಾಸ ತಿಳಿಸಿ ವಸ್ತು ಪಡೆದುಕೊಳ್ಳಿ’ ಎಂದ.

ಅನಂತರ ಆತ ನೀಡಿದ ಡೆಲಿವರಿ ಬಾಯ್ ನಂಬರ್ ಈ ರೀತಿ ಇತ್ತು. ಮೊಬೈಲ್‍ನಲ್ಲಿರುವ ಸ್ಟಾರ್ ಒತ್ತಿ 21 ಸಂಖ್ಯೆ ಒತ್ತಿ. ಮತ್ತೆ ಸ್ಟಾರ್ ಒತ್ತಿ. ಅನಂತರ 9204995564 ನಂತರ ಮೊಬೈಲ್‍ನಲ್ಲಿ 9 ಸಂಖ್ಯೆ ಕೆಳಗಿರುವ # ಒತ್ತಿ ಎಂದು ಹೇಳಿ, ಅನಂತರ ಹತ್ತು ನಿಮಿಷದಲ್ಲಿ ನಿಮ್ಮ ಮನೆ ಬಳಿಗೆ ಡೆಲಿವರಿ ಬಾಯ್ ಬರುತ್ತಾನೆ ಎಂದ.

ಕೆಲವರು ಆ ರೀತಿ ಮಾಡಿದಾಗ ಡೆಲಿವರಿ ಬಾಯ್ ಬರಲಿಲ್ಲ. ಅನಂತರ ಮೊಬೈಲ್ ಮೂಲಕ ಸೈಬರ್ ವಂಚನೆ ಮಾಡುವ ಬಗ್ಗೆ ಅರಿವಿದ್ದವರು ಇದು ವಂಚಿಸುವ ಫೇಕ್ ಕಾಲ್ ಎಂದು ವಿವರಿಸಿದರು. ಈ ರೀತಿ ಕರೆಗಳು ಈ ಬಡಾವಣೆಯೊಂದರಲ್ಲೇ ಹಲವಾರು ಮಂದಿಗೆ ಬಂದಿವೆ.

ಸ್ಟಾರ್ ಒತ್ತಿ ನಂತರ 21 ಸಂಖ್ಯೆ ಒತ್ತಿ; ಮತ್ತೆ ಸ್ಟಾರ್ ಹಾಗೂ ಆತ ನೀಡಿದ ಮೊಬೈಲ್ ಸಂಖ್ಯೆ ಒತ್ತಿದರೆ ಅದು ನಮ್ಮ ಮೊಬೈಲ್‍ನಲ್ಲಿರುವ ಎಲ್ಲಾ ಸಂಖ್ಯೆ ಹಾಗೂ ದಾಖಲೆಗಳು ಆತನಿಗೆ ಫಾರ್ವರ್ಡ್ ಆಗುತ್ತದೆ. ಆ ಮೂಲಕ ಆತ ದೂರವಾಣಿ ಸ್ವೀಕರಿಸಿ, ಆತ ಹೇಳಿದಂತೆ ನಂಬರ್ ಒತ್ತಿದವರ ಖಾತೆಯಿಂದ ಹಣ ಎಗರಿಸಬಹುದಾಗಿದೆ ಎಂದು ಸೈಬರ್ ವಂಚನೆ ಬಗ್ಗೆ ಅರಿವಿರುವವರು ತಿಳಿಸಿ, ಆ ತಕ್ಷಣ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲು ಸೂಚಿಸಿದ್ದು, ಹಲವು ದೂರು ದಾಖಲಾಗಿವೆ.

ಈ ವಂಚಕ ದೂರವಾಣಿ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯ ಜೊತೆಗೆ ಇನ್ನೊಬ್ಬರ ದೂರವಾಣಿ ಸಂಖ್ಯೆಯನ್ನು ನೀಡಿ ಅವರಿಗೆ ಮಾತನಾಡುತ್ತೇನೆ. ಅವರು ಡೆಲಿವರಿ ಬಾಯ್‍ಗೆ ಸೂಕ್ತವಾಗಿ ಫೋನ್ ಮಾಡಿದರೆ ಆತ ಬರುತ್ತಾನೆ ಎಂದು ಹೇಳುವ ಮೂಲಕ ಮತ್ತಷ್ಟು ವಂಚನೆಗೆ ಮುಂದಾಗಿದ್ದ. ಬ್ಯಾಂಕ್‍ಗಳಿಗೆ ಎರಡು ದಿನ ರಜೆ ಇದ್ದುದರಿಂದ ಯಾರ್ಯಾರ ಹಣ ವಂಚನೆಯಾಗಿದೆ ಎಂಬುದು ತಿಳಿದು ಬಂದಿಲ್ಲ. ಸೈಬರ್ ಪೊಲೀಸರು ಆ ತಕ್ಷಣ ದೂರು ನೀಡಿದವರ ಫೋನ್ ಮೂಲಕವೇ ಆತನಿಗೆ ಕರೆಗಳು ಫಾರ್ವರ್ಡ್ ಆಗದಂತೆ ಮಾಡಿದ್ದಾರೆ.

ಈ ರೀತಿ ಕರೆಗಳು ಬಂದಾಗ ಜಾಗೃತರಾಗಿರಲು ಹಾಗೂ ತಕ್ಷಣ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲು ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *