ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಗುಂಡಿಯಲ್ಲಿ ಅಂಗಡಿಗೆ ವಸ್ತು ಖರೀದಿಸಲು ತೆರಳಿದ್ದ ವ್ಯಕ್ತಿಯೊಬ್ಬರು ಹೊರಗಡೆ ನಿಲ್ಲಿಸಿದ್ದ ಸ್ಕೂಟರ್‌ನ್ನು ಕಳ್ಳನೊಬ್ಬ ಕಳವು ಮಾಡಿಕೊಂಡು ಪರಾರಿಯಾಗಿದ್ದ ಘಟನೆ ನಡೆದಿದೆ.
ಅಂಗಡಿಯಿಂದ ಹೊರಬಂದು ನೋಡಿದಾಗ ಸ್ಕೂಟರ್ ಕಾಣೆಯಾಗಿದ್ದು, ಬಳಿಕ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳ ಸ್ಕೂಟರ್‌ನ್ನು ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಸುಮಾರು 25 ಕಿ.ಮೀ. ದೂರದ ಕೊಟ್ಟಿಗೆಹಾರಕ್ಕೆ ಸ್ಕೂಟರ್‌ನಲ್ಲಿ ಬಂದಿದ್ದ ಕಳ್ಳ, ಅಂಗಡಿಯೊಂದರ ಬಳಿ ಸ್ಕೂಟರ್ ನಿಲ್ಲಿಸಿ ವಸ್ತು ಖರೀದಿಸುತ್ತಿದ್ದ ವೇಳೆ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದ ಬಾಳೆಹೊನ್ನೂರು ಪೊಲೀಸರು ಹಾಗೂ ಸ್ಕೂಟರ್ ಮಾಲೀಕರು ಸ್ಕೂಟರ್‌ನ್ನು ಗುರುತಿಸಿದ್ದಾರೆ. ಮಾಗುಂಡಿಯ ಆಸಿರ್ ಎಂಬಾತ ಸ್ಕೂಟರ್ ಕಳ್ಳತನ ಮಾಡಿಕೊಂಡು ಬಂದಾತ
ಪೊಲೀಸರು ಹಾಗೂ ಸ್ಥಳೀಯರು ಬರುತ್ತಿರುವುದನ್ನು ಗಮನಿಸಿದ ಆಸಿರ್ ಸ್ಕೂಟರ್‌ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಕೊಟ್ಟಿಗೆಹಾರದಲ್ಲಿ ಪೊದೆಯೊಂದರಲ್ಲಿ ಅಡಗಿ ಕುಳಿತಿದ್ದ ಆತನನ್ನು ಪೊಲೀಸರು ಹಾಗೂ ಕೊಟ್ಟಿಗೆಹಾರ ಗ್ರಾಮಸ್ಥರು ಹಿಂಬಾಲಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಆರೋಪಿಯನ್ನು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.


