ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೇಸ್ ಮುಖಂಡ, ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಅನಂತ್ ಅವರ ನಿಧನದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 9 ಗಂಟೆಗೆ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗ್ಗೆಯಿಂದಲೇ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ತಂಡೋಪತಂಡವಾಗಿ ಆಗಮಿಸಿ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ತಾಲೂಕಿನ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅನಂತ್ ಅವರ ಅಗಲಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ನೋವುಂಟುಮಾಡಿತ್ತು. ಅನಂತ್ ಅವರ ನಿಧನದ ಸುದ್ದಿ ತಿಳಿದು ಅವರ ಪಾರ್ಥೀವ ಶರೀರ ಪಟ್ಟಣಕ್ಕೆ ತರುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಅಭಿಮಾನಿಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದರು.
ಬೆಳಗ್ಗೆಯಿಂದಲೇ ಸಾರ್ವಜನಿಕ ದರ್ಶನಕ್ಕೆ ಆಗಮಿಸಿದ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಸರತಿ ಸಾಲಿನಲ್ಲಿ ನಿಂತು ಅಂತಿಮ ನಮನ ಸಲ್ಲಿಸಿದ ಜನರು, ಅನಂತ್ ಅವರೊಂದಿಗಿನ ಒಡನಾಟ ಹಾಗೂ ನೆನಪುಗಳನ್ನು ಮೆಲುಕು ಹಾಕಿದರು. ಅಪಾರ ಜನಸ್ತೋಮದ ನಡುವೆ ಕುಟುಂಬದವರು ದುಃಖತಪ್ತರಾಗಿದ್ದರು. ಅವರ ಅಗಲಿಕೆಗೆ ವಿವಿಧ ಗಣ್ಯರು ಸಂತಾಪ ಸೂಚಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ತಾಲೂಕಿನ ಜನರು ಓರ್ವ ಆತ್ಮೀಯ ನಾಯಕನನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿದರು. ಬಳಿಕ ಮಧ್ಯಾಹ್ನ ಅನಂತ್ ಅವರ ಪಾರ್ಥೀವ ಶರೀರವನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಸ್ವಗ್ರಾಮ ಮಗ್ಗಲಮಕ್ಕಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.

ಶಾಸಕರಾದ ನಯನಾ ಮೋಟಮ್ಮ, ಹೆಚ್.ಡಿ. ತಮ್ಮಯ್ಯ, ಎಂಎಲ್ಸಿ ಗಾಯಿತ್ರಿ ಶಾಂತೇಗೌಡ, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಸೇರಿದಂತೆ ವಿವಿಧ ಪಕ್ಷಗಳ, ಸಂಘಸಂಸ್ಥೆಗಳ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.



