ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆ ಅಸಮರ್ಪಕ ಅನುಷ್ಠಾನದಿಂದಾಗಿ ಹಳ್ಳಹಿಡಿಯುತ್ತಿದೆ. ಇದಕ್ಕೆ ಉದಾಹರಣೆಯಾಗಿ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ನೆನೆಗುದಿಗೆ ಬಿದ್ದಿರುವ ಮತ್ತು ಅಪೂರ್ಣ ಕಾಮಗಾರಿಗಳ ಚಿತ್ರಣ ಎಲ್ಲೆಡೆ ಕಣ್ಣಿಗೆ ರಾಚುತ್ತಿವೆ.
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹೋಬಳಿ ವ್ಯಾಪ್ತಿಯ ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ವ್ಯಾಪಕ ಲೋಪದೋಷಗಳು ಕಂಡುಬಂದಿವೆ.
ಸತ್ತೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳ್ಳ ಗ್ರಾಮದಲ್ಲಿ ಜಲಜೀವನ್ ಯೋಜನೆ ಅಡಿಯಲ್ಲಿ ನಡೆಸಿರುವ ಕಾಮಗಾರಿ ಅಪೂರ್ಣಗೊಂಡಿದ್ದು, ನೀರಿನ ಮೂಲವನ್ನು ಗುರುತಿಸದೇ ಕೇವಲ ಟ್ಯಾಂಕ್ ನಿರ್ಮಿಸಿ, ಪೈಪ್ ಲೈನ್ ಅಳವಡಿಸಲಾಗಿದೆ.
ಊರಿಗೆ ನೀರು ಬರುತ್ತದೆ ಸ್ಥಳೀಯ ಬಡವರಿಗೆ ಅನುಕೂಲವಾಗುತ್ತದೆ ಎಂದು ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳೀಯ ಕಾಫಿ ಎಸ್ಟೇಟ್ ಮಾಲೀಕರೇ ತಮ್ಮ ಜಮೀನಿನಲ್ಲಿ ಜಾಗ ಬಿಟ್ಟುಕೊಟ್ಟಿದ್ದಾರೆ. ಅಲ್ಲಿ ಟ್ಯಾಂಕ್ ಕೂಡ ನಿರ್ಮಾಣವಾಗಿದೆ. ಟ್ಯಾಂಕ್ ನಿಂದ ಮನೆಗಳ ಸಮೀಪಕ್ಕೆ ನೀರಿನ ಪೈಪ್ ಗಳನ್ನು ಕೂಡ ಅಳವಡಿಸಲಾಗಿದೆ.

ಅಂದಾಜು 80 ಲಕ್ಷ ವೆಚ್ಚದ ಈ ಯೋಜನೆಯಿಂದ ವರ್ಷಗಳು ಕಳೆದರೂ ಇದುವರೆಗೂ ಒಂದು ಹನಿ ನೀರು ಜನರಿಗೆ ನೀಡಲು ಸಾಧ್ಯವಾಗಿಲ್ಲ. ಅಬ್ದುಲ್ ಖಾದರ್ ಎಂಬುವವರು ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಮೂಲಭೂತವಾಗಿ ಬೇಕಾದ ನೀರಿನ ವ್ಯವಸ್ಥೆ ಮಾಡಿಕೊಳ್ಳದೇ ಕೇವಲ ಟ್ಯಾಂಕ್ ಮತ್ತು ಪೈಪ್ ಲೈನ್ ಮಾಡಿ ಕಾಮಗಾರಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ.
ಇಂಜಿನಿಯರ್ ಕೇಳಿದರೆ ಗುತ್ತಿಗೆದಾರ, ಗುತ್ತಿಗೆದಾರನ ಕೇಳಿದರೆ ಬೋರ್ವೆಲ್ ಕೊರೆಯುವವರ ಮೇಲೆ ದೂರು ಹೇಳುತ್ತಾರೆ. ಜನರು ಮಾತ್ರ ಇಂದು ನೀರು ಬರುತ್ತದೆ..ನಾಳೆ ನೀರು ಬರುತ್ತದೆ ಎಂದು ಕಾದು ಬಸವಳಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರು ಜಿ.ಪಂ. ಸಿಇಓ ಸಂಬಂಧಿಸಿದ ಶಾಸಕರು, ಅಧಿಕಾರಿಗಳು ಗಮನ ಹರಿಸಿ ಜಿಲ್ಲೆಯಾದ್ಯಂತ ಹೀಗೆ ನೆನೆಗುದಿಗೆ ಬಿದ್ದಿರುವ ಜಲಜೀವನ್ ಯೋಜನೆ ಕಾಮಗಾರಿಗಳು ಪೂರ್ಣಗೊಳಿಸಲು ಕ್ರಮ ವಹಿಸಬೇಕು.


