ಸುಮಾರು 10 ಕೋಟಿ ರೂ. ಮೌಲ್ಯದ ಆ್ಯಂಬರ್‌ಗ್ರಿಸ್ (ತಿಮಿಂಗಿಲ ವಾಂತಿ) ವಶಪಡಿಸಿಕೊಂಡು 10 ಮಂದಿಯನ್ನು ಬಂಧಿಸಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮದಲ್ಲಿ ನಡೆದಿದೆ.
ಕೇರಳದ ತಿರುನಂತಪುರಂನಿಂದ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ವಿರಾಜಪಟೇಟೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಬಂಧಿತರಿಂದ 10 ಕೋಟಿ ರೂ. ಮೌಲ್ಯದ 10 ಕೆ.ಜಿ 390 ಗ್ರಾಂ ತೂಕದ ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. . ಶಂಶುದ್ದೀನ್ (45), ಎಂ.ನವಾಜ್ (54 ವರ್ಷ), ವಿ.ಕೆ ಲತೀಶ್ (53), ವಿಜೇಶ್.ವಿ (40), ಪ್ರಶಾಂತ್.ಟಿ (52), ಎ.ವಿ ಶಂಶುದ್ದೀನ್ (48), ಬಾಲಚಂದ್ರನಾಯಕ್ (55), ಕೆ.ಕೆ ಜೋಬಿಸ್ (33) ವರ್ಷ ಬಂಧಿತ ಆರೋಪಿಗಳು.
ತಿಮಿಂಗಿಲ ವಾಂತಿಗೆ ಯಾಕಿಷ್ಟು ಬೇಡಿಕೆ?
ಅಂಬರ್ ಗ್ರೀಸ್ ಅಥವಾ ತಿಮಿಂಗಿಲ ವಾಂತಿ ಎನ್ನುವುದು ಮೇಣದಂಥ ವಸ್ತುವಾಗಿದ್ದು, ಇದನ್ನ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಚ್ಚಾವಸ್ತುವಾಗಿದ್ದಾಗಲೂ ಅಂಬರ್ ಗ್ರೀಸ್ ಕೊಂಚ ಸುವಾಸನೆ ಬೀರುವಂಥದ್ದಾಗಿರುತ್ತದೆ. ಕೆಲವು ದೇಶಗಳಲ್ಲಿ ಕಾಮೋತ್ತೇಜಕ ವಸ್ತುಗಳ ತಯಾರಿಕೆಯಲ್ಲೂ ಇದನ್ನ ಬಳಸಲಾಗುತ್ತದೆ.
ತಿಮಿಂಗಿಲ ವಾಂತಿ ಸಿಗುವುದು ಬಹಳ ಅಪರೂಪ. ಏಕೆಂದರೆ, ತಿಮಿಂಗಿಲಗಳು ಸಮುದ್ರದಲ್ಲಿ ವಾಂತಿ ಮಾಡಿಕೊಳ್ಳುವುದು ಅಪರೂಪ ಹಾಗೂ ಅವು ಜನಸಾಮಾನ್ಯರಿಗೆ ಸಿಗುವುದು ತುಂಬಾ ವಿರಳ. ಹಾಗಾಗಿ ಈ ವಸ್ತುವಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಆದರೆ ಕಳ್ಳಸಾಗಣೆದಾರರು ಅಂಬರ್ ಗ್ರೀಸ್‌ಗಾಗಿ ಸಮುದ್ರಗಳಿಗೆ ದಾಂಗುಡಿ ಇಡುವುದನ್ನು ತಪ್ಪಿಸಲು ಬಹುತೇಕ ದೇಶಗಳು ಇದರ ಮಾರಾಟ ನಿಷೇಧಿಸಿವೆ. ಹಾಗಾಗಿ ಇದು ಕಳ್ಳಸಾಗಣೆಯಾಗುತ್ತಿದೆ.


