ಮೂಡಿಗೆರೆ ತಾಲೂಕು ಕೂವೆ ಕಲ್ಮನೆ ಗ್ರಾಮದ ಸರ್ವೆ ನಂಬರ್ 49, 50 ರ ಪ್ರದೇಶ ಜನವಸತಿಯಾಗಿದ್ದು ಅದನ್ನು ಮೀಸಲು ಅರಣ್ಯದಿಂದ ಮುಕ್ತ ಮಾಡುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಮೂಡಿಗೆರೆ ಬೆಳೆಗಾರರ ಸಂಘ ಆಗ್ರಹಿಸಿದೆ.
ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಅರಣ್ಯ ಸಂರಕ್ಷಣಾಧಿಕಾರಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸರ್ವೆ ನಂಬರ್ 49 ಮತ್ತು 61 ರ ಜಾಗ ಜನವಸತಿ ಪ್ರದೇಶವಾಗಿರುವುದರಿಂದ ಇದನ್ನು ಮೀಸಲು ಅರಣ್ಯ ಮಾಡಲು ಸ್ಥಳೀಯ ಜನರ ವಿರೋಧವಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ನಡಾವಳಿ ಮಾಡಲಾಗಿದೆ. ಈ ಜಮೀನಿನ ಸ್ಥಳ ತನಿಖೆ ಮಾಡುವಂತೆ ಆಗ್ರಹಿಸಿ ಕಂದಾಯ ಇಲಾಖೆಗೆ ಮನವಿ ಮಾಡಿದ ಪರಿಣಾಮ ಉಪತಹಸೀಲ್ದಾರ್, ರೆವಿನ್ಯೂ ಇನ್ಸ್‌ಫೆಕ್ಟರ್, ವಿಎ ಅವರು ಸ್ಥಳ ತನಿಖೆ ಮಾಡಿ ಶಿವಮೊಗ್ಗ ಅರಣ್ಯ ವ್ಯವಸ್ಥಾಪಕರಿಗೆ ವರದಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ವರದಿಯಲ್ಲಿ ಈ ಪ್ರದೇಶ ಜನವಸತಿಯಿಂದ ಕೂಡಿದ್ದಾಗಿದೆ ಎಂದು ತಿಳಿಸಿದ್ದಾರೆ. ಆದರೂ ಇನ್ನೂ ಅದನ್ನು ಮೀಸಲು ಅರಣ್ಯದಿಂದ ಕೈಬಿಟ್ಟು ಜನವಸತಿ ಪ್ರದೇಶ ಎಂದು ಘೋಷಿಸುವ ಮಾರ್ಪಾಡು ಮಾಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ವೆ ನಂಬರ್ 49 ಮತ್ತು 51 ನ್ನು ಬಿಟ್ಟು ಸರ್ವೆ ನಂಬರ್ 46 ನ್ನು ಮೀಸಲು ಅರಣ್ಯ ಮಾಡಲು ಸ್ಥಳೀಯರು ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಮನವಿ ಪರಿಗಣಿಸಿ ಜನವಸತಿ ಪ್ರದೇಶವನ್ನು ಅರಣ್ಯದಿಂದ ತೆರವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಮೂಡಿಗೆರೆ ಬೆಳೆಗಾರರ ಸಂಘ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕೂವೆ ಕಲ್ಮನೆ ಭಾಗದ ಬೆಳೆಗಾರರು ಉಪಸ್ಥಿತರಿದ್ದರು.



