ಮೂಡಿಗೆರೆ ಪಟ್ಟಣದ ವಾರ್ಡ್ ನಂ. 9 ರ ಜೆ.ಎಂ ರಸ್ತೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಮನೆಗಳಿಂದ ಹೊರಬಂದರೆ ಸಾಕು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಪಟ್ಟಣದ ಕೆ.ಎಂ ರಸ್ತೆಯಲ್ಲಿರುವ ಕೆಲವೊಂದು ಹೋಟೇಲ್ ಗಳ ತ್ಯಾಜ್ಯ, ಗಲೀಜು ನೀರು ದೊಡ್ಡ ದೊಡ್ಡ ಪೈಪ್ ಗಳ ಮುಖಾಂತರ ಇಲ್ಲಿನ ಚರಂಡಿಗಳಿಗೆ ಹರಿಯುತ್ತಿರುವುದರಿಂದ ಚರಂಡಿಗಳಲ್ಲಿ ತ್ಯಾಜ್ಯ ಹಾಗೂ ಗಲೀಜಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಅದಲ್ಲದೆ ಹೋಟೆಲ್ ಗಳ ಗಲೀಜು ನೀರು ಹರಿಯುವ ಚರಂಡಿಯೂ ಸಹ ಹಲವಾರು ಕಡೆ ಹೊಡೆದು ಹೋಗಿದ್ದು ಇದನ್ನು ದುರಸ್ತಿ ಗಳಿಸದೆ ವರ್ಷಗಳೆ ಕಳೆದಿವೆ. ಚರಂಡಿ ಹೊಡೆದು ಹೋಗಿ ಪಕ್ಕದ ಮನೆಯ ತಡೆಗೊಡೆಗೆ ಸಂಪೂರ್ಣವಾಗಿ ಹಾನಿಯಾಗಿದ್ದು ತಡೆಗೋಡೆ ಬೀಳುವ ಹಂತದಲ್ಲಿದೆ ಎಂದು ವಾರ್ಡ್ ನಂ 9 ರ ನಿವಾಸಿ ಎಸ್ಡಿಪಿಐ ಮುಖಂಡ ಫೈಜ್ ಹುಸೇನ್ ಆರೋಪಿಸಿದ್ದಾರೆ.

ಇವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ : ಇದೇ ರಸ್ತೆಯಲ್ಲಿ ಪ್ರತಿಷ್ಠಿತ ಆಸ್ಪತ್ರೆಯೂ ಸಹ ಇದ್ದು ದಿನನಿತ್ಯ ಹಲವಾರು ಜನರು ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಇನ್ನೊಂದು ಬದಿಯ ಚರಂಡಿಯಲ್ಲಿ ಕಸ ನಿರ್ವಹಣೆ ಆಗದೆ ಕೂಳು ತುಂಬಿ ತುಳುಕುತ್ತಿದೆ, ಮಳೆಯ ನೀರು ರಸ್ತೆಯ ಮೇಲೆ ಹರಿದು ಅಕ್ಕಪಕ್ಕದ ಮನೆಯಂಗಳಕ್ಕೆ ಬರುತ್ತಿದೆ.
ಈ ಹಿಂದೆ ದಿನನಿತ್ಯಬರುತ್ತಿದ್ದ ಕಸದ ವಾಹನವು ಸಹ ಈಗ ಸರಿಯಾಗಿ ಬರದೇ ಇರುವುದರಿಂದ ಜನರು ಎಲ್ಲೆಂದರಲ್ಲಿ ಕಸವನ್ನು ಬಿಸಾಡುತ್ತಿದ್ದು ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕಿದೆ. ಇಲ್ಲಿನ ಜನಪ್ರತಿನಿಧಿಗಳಿಗೆ ಈ ವಿಚಾರದಲ್ಲಿ ಈ ಹಿಂದೆಯೂ ಸಹ ಹಲವಾರು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಮೂಡಿಗೆರೆಯ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಇಲ್ಲಿನ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.



