ಆರ್‌ಸಿಬಿ ಐಪಿಎಲ್ ಟ್ರೊಪಿ ಗೆದ್ದ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕಾಲ್ತುಳಿತ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದರು. ನಿನ್ನೆ ಆರ್‌ಸಿಬಿ ತಂಡ ಫೈನಲ್ ಪಂದ್ಯ ಜಯಗೊಳಿಸಿತ್ತು. ಇಂದು ವಿಜಯೋತ್ಸವ ಆಯೋಜಿಸಲಾಗಿತ್ತು. ಕ್ರಿಕೆಟ್ ಅಸೋಸಿಯೇಷನ್, ಸರ್ಕಾರದ ವತಿಯಿಂದಲೂ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇಂತಹ ಘಟನೆ ನಡೆಯಬಾರದಾಗಿತ್ತು. ಬಹಳ ದೊಡ್ಡ ದುರಂತ ನಡೆದಿದೆ. ಕಾಲ್ತುಳಿತಕ್ಕೆ ಒಳಗಾಗಿ 11 ಜನ ಮೃತರಾಗಿದ್ದಾರೆ. 47 ಜನರು ಗಾಯಗೊಂಡಿದ್ದಾರೆ ಎಂದು ಸಿಎಂ ವಿಷಾದಿಸಿದರು.

ನಾನು ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೆ. ಸಂಭ್ರಮ ಆಚರಣೆ ಮಾಡುವಾಗ ಇಂತಹ ದುರಂತ ನಡೆಯಬಾರದಿತ್ತು. ನಮ್ಮ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸೇರಿದ್ದರು. ಘಟನೆಗೆ ಸರ್ಕಾರ ಬಹಳ ದುಃಖ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.
ವಿಧಾನಸೌಧ ಎದರು 1 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಅಲ್ಲಿ ಯಾವುದೇ ಅನಿರೀಕ್ಷಿತ ಘಟನೆ ದುರಂತ ನಡೆದಿಲ್ಲ. ಆದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ದುರಂತ ಆಗಿದೆ. ಯಾರು ಸಹ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಕೆಎಸ್‌ಸಿಎ, ಸರ್ಕಾರ ಇದನ್ನ ನಿರೀಕ್ಷಿಸಿರಲಿಲ್ಲ. ಕ್ರೀಡಾಂಗಣದಲ್ಲಿ 35 ಸಾವಿರ ಜನರಿಗೆ ಮಾತ್ರ ಆಸನದ ವ್ಯವಸ್ಥೆ ಇತ್ತು. ಆದರೆ 2-3 ಲಕ್ಷ ಜನ ಬಂದಿದ್ದರಂತೆ. ಇಂದು ಸಂಭ್ರಮದ ಬಗ್ಗೆ ಕೆಎಸ್‌ಸಿಎ ಮಾಹಿತಿ ಕೊಟ್ಟಿತ್ತು. ಹೀಗಾಗಿ ಇಷ್ಟು ಜನ ಬರುತ್ತಾರೆಂಬ ನಿರೀಕ್ಷೆ ಇರಲಿಲ್ಲ. ಆಸನದ ವ್ಯವಸ್ಥೆ ಇರುವಷ್ಟು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಬರುವ ನಿರೀಕ್ಷೆ ಇತ್ತು ಎಂದರು.
ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಕೊಡುತ್ತೇವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೂ ಸರ್ಕಾರ ಹಣ ಕೊಡುತ್ತದೆ. ಎಲ್ಲಾ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಒಟ್ಟು 47 ಜನ ಗಾಯಗೊಂಡಿದ್ದಾರೆ. ಕೆಲವರು ಚಿಕಿತ್ಸೆ ಪಡೆದು ಹೋಗಿದ್ದಾರೆ. ಒಟ್ಟಾರೆ 47 ಜನಕ್ಕೆ ಗಾಯ ಆಗಿದೆ. ಎಲ್ಲಾ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಡಾಕ್ಟರ್ ಹೇಳಿದ್ದಾರೆ. ಗಾಯಾಳುಗಳ ಸಾರಿಗೆ, ಊಟ ಎಲ್ಲಾ ವ್ಯವಸ್ಥೆ ಸರ್ಕಾರ ಮಾಡಲಿದೆ. ಅನಿರೀಕ್ಷಿತ ದುರಂತ ಇದು ಎಂದು ಸಿಎಂ ನೊಂದು ನುಡಿದರು.
ಯಾರು ಕಾಲ್ತುಳಿತದಲ್ಲಿ ಸತ್ತಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಸರ್ಕಾರ ಪ್ರಾರ್ಥನೆ ಮಾಡುತ್ತದೆ. ವಿದ್ಯಾರ್ಥಿಗಳು, ಯುವಕ-ಯುವತಿಯರು ಮೃತರಾಗಿದ್ದಾರೆ. ಅವರ ಪೋಷಕರಿಗೆ ಸಾವಿನ ದುಃಖ ಭರಿಸೋ ಶಕ್ತಿ ದೇವರು ಕೊಡಲಿ ಎಂದರಲ್ಲದೇ, ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಲಾಗಿದೆ ಎಂದರು.



