ಜೂನ್ 9 ಸೋಮವಾರದಂದು ಚಿಕ್ಕಮಗಳೂರಿನಲ್ಲಿ ಕರ್ನಾಟಕ ಗ್ರೋಯರ್ಸ್ ಫೆಡರೇಶನ್ ಹಾಗೂ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಜಿಲ್ಲೆಯ ಎಲ್ಲ ಪ್ರಗತಿಪರ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದು ಸಮಾವೇಶದಲ್ಲಿ ಕಾಫಿಬೆಳೆಯುವ ಪ್ರದೇಶಗಳ ಎಲ್ಲಾ ಬೆಳೆಗಾರರು, ಉದ್ಯಮಿಗಳು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಕರೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು ಸಮಾವೇಶದಲ್ಲಿ ಪ್ರಮುಖವಾಗಿ ಈ ಕೆಳಗಿನ ವಿಚಾರಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ.
ಫಾರಂ 50 ಹಾಗೂ 53 ರಲ್ಲಿ ನ್ಯಾಯಯುತವಾಗಿ ಮಂಜೂರಾದ ಜಮೀನುಗಳನ್ನು ವಿನಾಕಾರಣ ರದ್ದು ಮಾಡಲಾಗಿದೆ. ರೈತ – ಬೆಳೆಗಾರರ ಕೃಷಿ ಭೂಮಿಯನ್ನು ದಿಢೀರನೆ ಸೆಕ್ಷನ್ 4(1) ಅಡಿಯಲ್ಲಿ ತಂದಿದ್ದು, ಶತಮಾನಗಳಿಂದ ಸಾಗುವಳಿ ಮಾಡಿಕೊಂಡು ಬಂದ ಭೂಮಿಯನ್ನು “ಡೀಮ್ಡ್ ಫಾರೆಸ್ಟ್” ಹೆಸರಿನಲ್ಲಿ ದಾಖಲಿಸಲಾಗಿದೆ. ದಿನೇ ದಿನೇ ಕಾಡಾನೆ ಕಾಡುಕೋಣ ಮುಂತಾದ ವನ್ಯಜೀವಿಗಳ ಹಾವಳಿಯಿಂದ ಕೃಷಿ ಕಾರ್ಯಕ್ಕೆ ತೀವ್ರ ನಷ್ಟ ಮತ್ತು ಅಡ್ಡಿಯಾಗುತ್ತಿದೆ. ಪ್ಲಾಂಟೇಶನ್ ಬೆಳೆಗಾರರ ಅನಧಿಕೃತ ಸಾಗುವಳಿಯನ್ನ ಲೀಸ್ ಮೂಲಕ ನೀಡಲು ಪಡೆದ ಅರ್ಜಿಗಳ ವಿಲೇವಾರಿ ಮಾಡಲು ವಿಳಂಬ ಮಾಡಲಾಗುತ್ತಿದೆ, ಸಾವಿರಾರು ಸಂಖ್ಯೆಯಲ್ಲಿರುವ ವಸತಿ ರಹಿತರಿಗೆ ನಿವೇಶನ ಹಂಚಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಇವಲ್ಲದೇ ಇನ್ನೂ ಅನೇಕ ರೀತಿಯ ಸಮಸ್ಯೆಗಳನ್ನು ರೈತ ಕಾರ್ಮಿಕ ವರ್ಗದವರು ಅನುಭವಿಸುತ್ತಿದ್ದಾರೆ.
ಸರ್ಕಾರಣಕ್ಕೆ ಕೋಟ್ಯಾಂತರ ರೂಪಾಯಿ ವಿದೇಶಿ ವಿನಿಮಯ ಮತ್ತು ಲಕ್ಷಾಂತರ ಕಾರ್ಮಿಕರಿಗೆ ಜೀವನಾಧಾರವಾಗಿರುವ ಕಾಫಿ ಬೆಳೆಗಾರರ ಬಗ್ಗೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಮನೋಭಾವನೆಯ ಬಗ್ಗೆ ಒಗ್ಗಟ್ಟಿನಿಂದ ಗಮನ ಸೆಳೆಯುವ ಸಂದರ್ಭ ಒದಗಿ ಬಂದಿದೆ.

ಈ ಎಲ್ಲ ಅಂಶಗಳನ್ನು ಚರ್ಚಿಸಿ ಮುಂದಿನ ಹೋರಾಟಕ್ಕೆ ಸ್ಪಷ್ಟವಾದ ದಿಕ್ಕನ್ನು ಸೂಚಿಸುವ ಸಲುವಾಗಿ ಈ ಬೃಹತ್ ಸಮಾವೇಶ ನಡೆಯಲಿದೆ. ಜೂನ್ 9 ರಂದು ಬೆಳಿಗ್ಗೆ ಚಿಕ್ಕಮಗಳೂರು ತಾಲ್ಲೂಕು ಕಛೇರಿ ಆವರಣದಿಂದ ಅಜಾದ್ ಪಾರ್ಕ್ ವರೆಗೆ ಮೆರವಣಿಗೆ ನಡೆಸಿ ಸಮಾವೇಶ ನಡೆಸಲಾಗುತ್ತಿದೆ.
ಇದು ಮಲೆನಾಡಿನ ಸ್ವಾಭಿಮಾನಿ ರೈತ ಬೆಳೆಗಾರರ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಕಾಫಿನಾಡಿನ ಜನರು ಒಮ್ಮನಸ್ಸಿನಿಂದ ನಮ್ಮದೇ ಬದುಕಿನ ಉಳಿವಿಗಾಗಿ ಈ ರೈತ ಸಮಾವೇಶದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮೂಡಿಗೆರೆ ಬೆಳೆಗಾರರ ಸಂಘದ ಪರವಾಗಿ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕಾರ್ಯದರ್ಶಿ ಮನೋಹರ್ ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.



