November 1, 2026
;
malekadu1

 

 

ಪ್ರಕೃತಿಯಲ್ಲಿ ಎಲ್ಲಾ ಜೀವರಾಶಿಗಳು ಬದುಕುಬೇಕೆಂದರೆ ಅಳಿವಿನಂಚಿನಲ್ಲಿರುವ ಮಳೆ ಕಾಡುಗಳ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕೆಂದು ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಹೇಳಿದರು.

ಅವರು ಭಾನುವಾರ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಳೆ ಕಾಡುಗಳ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾನವನ ಸ್ವಾರ್ಥದಿಂದಾಗಿ ಪ್ರಕೃತಿ ಮೇಲೆ ನಿರಂತರ ದಾಳಿಯಾಗುತ್ತಿದೆ. ಇದರಿಂದ ಹವಮಾನದ ಸಮತೋಲನದಲ್ಲಿ ಏರುಪೇರು ಉಂಟಾಗಿ, ಮುಂದಿನ ಪೀಳಿಗೆ ಅಪಾಯದಲ್ಲಿ ಸಿಲುಕುವ ಸಾಧ್ಯತೆಯಿದೆ. ಹವಮಾನ ತನ್ನ ಸಮತೋಲನ ಕಾಪಾಡಿಕೊಳ್ಳಲು ಕಾಡು ರಕ್ಷಣೆ ಅಗತ್ಯವಾಗಿದೆ ಎಂದು ಹೇಳಿದರು.\

ಎಸಿಎಫ್ ಕೆ.ಎಸ್.ಮೋಹನ್ ಮಾತನಾಡಿ, ನಮ್ಮ ವಾತಾವರಣ ಮತ್ತು ಸಮಾಜಕ್ಕೆ ಪ್ರಯೋಜನಕಾರಿಯಾದ ಅನೇಕ ಸಸ್ಯ ಹಾಗೂ ಪ್ರಾಣಿಗಳನ್ನು ಕಳೆದುಕೊಳ್ಳುತ್ತೇವೆ. ಅಲ್ಲದೇ ಪ್ರಕೃತಿಯಲ್ಲಿನ ಅಸಮತೋಲದಿಂದಾಗಿ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಈಗಾಗಲೇ ಬಹಳಷ್ಟು ವ್ಯತ್ಯಾಸ ಕಾಣುತ್ತಿದ್ದೇವೆ. ಹಾಗಾಗಿ ಹವಮಾನ ಸಮತೋಲನಕ್ಕೆ ಅರಣ್ಯ ರಕ್ಷಿಸುವ ಜತೆಗೆ ಪ್ರತಿ ಮನೆಯಲ್ಲಿಯೂ ಒಂದೊಂದು ಗಿಡ ಬೆಳಸಿ ಪೋಷಿಸಬೇಕೆಂದು ಮನವಿ ಮಾಡಿದರು.

ಆರ್‍ಎಫ್‍ಒ ಎಸ್.ಪಿ.ಕಾವ್ಯ  ಮಾತನಾಡಿ ; ವಿದ್ಯಾರ್ಥಿಗಳು ಈಗಿನಿಂದಲೇ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಪರಿಸರ ಸಮತೋಲನದಿಂದ ಕಾಯ್ದುಕೊಳ್ಳಬೇಕು ಎಂದರೆ ನಮ್ಮ ನಿತ್ಯದ ಚಟುವಟಿಕೆಗಳು ಪರಿಸರಕ್ಕೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ ಎಂದರು.

ಬಿದರಹಳ್ಳಿ ಮುರಾರ್ಜಿ ಶಾಲೆಯ ಪ್ರಾಂಶುಪಾಲ ಬಿ.ಟಿ.ವೆಂಕಟೇಶ್, ಬಾಳೂರು ಇಂದಿರಾಗಾಂಧಿ ವಸತಿಶಾಲೆ ಪ್ರಾಂಶುಪಾಲ ಮಲ್ಲಿಕಾರ್ಜುನ, ಅರಣ್ಯ ಇಲಾಖೆ ನೌಕರರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *