pusthaka

 

 

ಗ್ರಂಥಾಲಯ ಎಂಬುದು ಯಾವತ್ತೂ ವ್ಯರ್ಥವಲ್ಲ ಅದು ಓದುಗರ ವ್ಯಕ್ತಿತ್ವವನ್ನು ಬೆಳೆಸುತ್ತದೆ :ಡಾ ಬೆಳವಾಡಿ ಮಂಜುನಾಥ.

ಪುಸ್ತಕ ಭಂಡಾರ ಎಂಬುದು ಲೇಖಕರ ಧ್ವನಿಯನ್ನು ಪ್ರತಿನಿಧಿಸುತ್ತಲೇ ವಿಶ್ವಾಸಾತ್ಮಕವಾದ ಚಿಂತನೆಯ ಬನಿಯನ್ನು ನೀಡುತ್ತಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಆಯಾಮಕ್ಕೆ ಸಾಕ್ಷಿಪ್ರಜ್ಞೆಯಾಗಿದೆ ಎಂದು ಸಾಹಿತಿ ಡಾ. ಬೆಳವಾಡಿ ಮಂಜುನಾಥ ಅಭಿಪ್ರಾಯ ಪಟ್ಟರು.

ಕನ್ನಡ ಪುಸ್ತಕ ಪ್ರಾಧಿಕಾರದ ಚಿಕ್ಕಮಗಳೂರು ಜಿಲ್ಲಾ ಜಾಗೃತಿ ಸಮಿತಿಯು, ನಗರದ ಹೌಸಿಂಗ್ ಬೋರ್ಡ್ ನ ಟೀಚರ್ಸ್ ಕಾಲೋನಿಯಲ್ಲಿರುವ ಸಾಹಿತಿ ಮತ್ತು ವಿಮರ್ಶಕ ಡಾ ಎಚ್‍ಎಸ್ ಸತ್ಯನಾರಾಯಣ ಅವರ ಅಲಂಪು ನಿವಾಸದಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದ ಪ್ರಯುಕ್ತ ಕವಿ ಡಾ. ಎಚ್ ಎಸ್ ಸತ್ಯನಾರಾಯಣ ಅವರ ವಿರಚಿತ “ದಡವ ಮುಟ್ಟಿಸು” ಕವನ ಸಂಕಲವನ್ನು ಜನಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಪುಸ್ತಕದ ಓದು ಯಾವತ್ತೂ ವ್ಯರ್ಥವಲ್ಲ ಅದು ಓದುಗರ ವ್ಯಕ್ತಿತ್ವವನ್ನು ಎತ್ತರಕ್ಕೆ ಏರಿಸಿ ಮಕ್ಕಳ ಮನೋವಿಕಾಸವನ್ನು ವಿಸ್ತರಿಸಿ ಒಂದು ಸಂಸ್ಕಾರವನ್ನು ಕಟ್ಟಿಕೊಡುತ್ತದೆ, ಈ ದೃಷ್ಟಿಯಿಂದ ಪ್ರತಿ ಮನೆಮನೆಗೂ ಒಂದು ಗ್ರಂಥಾಲಯಗಳ ಅವಶ್ಯಕತೆ ಅಗತ್ಯ, ಆದರೆ ಪುಸ್ತಕಗಳನ್ನು ಕೇವಲ ಮನೆಯ ಅಲಂಕಾರಕ್ಕಾಗಿ ಜೋಡಿಸಿಕೊಳ್ಳದೆ ಓದುವ ಹವ್ಯಾಸವನ್ನು ರೂಡಿಸಿ ಕೊಂಡಾಗ ಮಾತ್ರ ಮನೆಗೊಂದು ಗ್ರಂಥಾಲಯ ಅನುಷ್ಠಾನದ ಯೋಜನೆ ಸಫಲತೆ ಕಾಣುತ್ತದೆ ಎಂದು ಪುಸ್ತಕ ಪ್ರಾಧಿಕಾರದ ಈ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ಲೇಖಕ ಮತ್ತು ಕಥೆಗಾರ ಶ್ರೀನಿವಾಸ್ ಪಿ ನಾಯ್ಡು ಅವರು ಮಾತನಾಡುತ್ತಾ, ತಲೆಮಾರಿನಿಂದ ತಲೆಮಾರಿಗೆ ಮಾನವ ಜನಾಂಗವನ್ನು ಪುಸ್ತಕಗಳು ಓದಿಸಿಕೊಂಡು ಬರುತ್ತಿವೆ, ಒಂದು ಅತ್ಯುತ್ತಮವಾದ ಪುಸ್ತಕದ ಓದಿನ ನಂತರ ಯಾವುದೇ ಓದುಗರ ವ್ಯಕ್ತಿತ್ವ ಬದಲಾಗುತ್ತದೆ, ಅಂತ ಶಕ್ತಿ ಪುಸ್ತಕಕ್ಕೆ ಇದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆತಿಥ್ಯವನ್ನು ವಹಿಸಿದ್ದ ವಿಮರ್ಶಕ ಡಾ. ಎಚ್‍ಎಸ್ ಸತ್ಯನಾರಾಯಣ ಅವರು ಮಾತನಾಡಿ, ಪುಸ್ತಕಗಳನ್ನು ನೋಡುವ,ಓದುವ ಮತ್ತು ಸಂಗ್ರಹಿಸುವ ಅಭಿರುಚಿಯನ್ನು ನಾನು ಬೆಳೆಸಿಕೊಂಡಿದ್ದು ನಾಡಿನ ಹಿರಿಯ ವಿದ್ವಾಂಸರಾದ ಡಾ. ಹಾ ಮಾ ನಾಯಕ ಅವರ ಮನೆಯ ಗ್ರಂಥಾಲಯಗಳನ್ನು ನೋಡಿ, ಹಾ ಮಾ ನಾಯಕರ ಮನೆಯ ಗ್ರಂಥಾಲಯವನ್ನು ನೋಡಿ ಪ್ರೇರಣೆಗೊಂಡ ನಾನು, ನಂತರ ಒಂದು ಕನ್ನಡ ನಿಘಂಟನ್ನು ಖರೀದಿಸುವ ಮೂಲಕ ಅಧ್ಯಯನಕ್ಕೆ ಇಳಿದು ಬರವಣಿಗೆಗೆ ತೊಡಗಿ, ವೃತ್ತಿ ಬದುಕಿನ ಜೊತೆ ಜೊತೆಗೆ ಪ್ರವೃತ್ತಿಯಾಗಿ ತೊಡಗಿಸಿಕೊಂಡ ಈ ಸಾಹಿತ್ಯ ಕೃಷಿಯು ನಾಡಿನಾದ್ಯಂತ ಅತಿ ದೊಡ್ಡ ಸಂಬಂಧವನ್ನು ಕಲ್ಪಿಸಿಕೊಟ್ಟಿದೆ, ಇಂತಹ ಒಂದು ವ್ಯಾಪಕ ಸಂಬಂಧಕ್ಕೆ ಪುಸ್ತಕಗಳೇ ಕಾರಣವಾಗಿವೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕ ಡಿ. ಎಂ ಮಂಜುನಾಥಸ್ವಾಮಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು, ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭವು ಕೇವಲ ಗ್ರಂಥಾಲಯಗಳ ಸ್ಥಾಪನೆ ಮಾತ್ರವಲ್ಲ, ಇದು ಕನ್ನಡ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಳುವಳಿಯಾಗಿ ರಾಜ್ಯದ ಉದ್ದಗಲಕ್ಕೂ ಪಯಣ ಮಾಡತ್ತಾ ಗ್ರಂಥಾಲಯಗಳ ಸ್ಥಾಪನೆಗಾಗಿ ಆಂದೋಲನದ ರೂಪ ಕೊಟ್ಟು ಹೆಜ್ಜೆ ಇಟ್ಟಿದೆ, ಕನ್ನಡ ಪುಸ್ತಕಗಳ ಇತಿಹಾಸದಲ್ಲಿ ಇದೊಂದು ವಿನೂತನ ನಡಿಗೆಯಾಗಿದೆ,ಯಾವ ಸಮಾಜ ಓದುಗ ಸಮಾಜವಾಗಿರುತ್ತದೆಯೋ ಅಂತಹ ಸಮಾಜಕ್ಕೆ ಬಾಳಿಕೆ ಹೆಚ್ಚು, ವಿವಿಧ ಕಾರಣಗಳಿಗಾಗಿ ಮಸುಕಾಗಿರುವ ಬಹುತ್ವದ ಭಾರತವನ್ನು ಬೆಳಗಿಸುವುದಗೋಸ್ಕರ ಪುಸ್ತಕಗಳ ಓದು ಅಧ್ಯಯನ ಮತ್ತು ಗ್ರಂಥಾಲಯಗಳ ಸ್ಥಾಪನೆ ಅಗತ್ಯವಾಗಿದೆ ಎಂದರು.

ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಹಾಗೂ ಅಧ್ಯಾಪಕ ಡಾ. ಕೆ ಎನ್ ಲಕ್ಷ್ಮಿಕಾಂತ್ ಪ್ರಸ್ತಾವಿಕವಾಗಿ ಮಾತನಾಡಿದರು.

ಅಜ್ಜಂಪುರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್, ಚಿಕ್ಕಮಗಳೂರು ತಾಲೂಕು ಕಸಾಪ ಅಧ್ಯಕ್ಷರಾದ ಎಸ್ ಎಂ ಲೋಕೇಶ್ವರಪ್ಪ, ನಿವೃತ್ತ ಪ್ರಾಧ್ಯಾಪಕ ಡಾ.ರಾಧಾಕೃಷ್ಣ, ಶಿಕ್ಷಕ ಚಂದ್ರಪ್ಪ, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯೆ ಎಚ್ ಎಲ್ ಸುಜಾತ, ನವ್ಯ ಪಿ ನಾಯ್ಡು ಮುಂತಾದವರು ಉಪಸ್ಥಿತಿ ಇದ್ದರು.

ಕವಿಯತ್ರಿ ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯೆ ಸೌಭಾಗ್ಯ ಮಹಾಂತೇಶ್ ಕಾರ್ಯಕ್ರಮ ನಿರೂಪಿಸಿ, ಪ್ರಾಧ್ಯಾಪಕ ಹಳೇಬೀಡು ಬಸವರಾಜ್ ಸ್ವಾಗತಿಸಿ,ಯೋಜನ್ ಮತ್ತು ಭುವನ್ ಸಹೋದರರು ಪ್ರಾರ್ಥಿಸಿದರು..

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ