ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು ಏಳು ದಿನಗಳೊಳಗಾಗಿ ಮಧ್ಯೆ ಪ್ರವೇಶಿಸಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರ ನಡವಳಿಕೆಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಸದ್ಯದಲ್ಲೇ ಪರ್ಯಾಯವಾಗಿ ನೂತನ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಅಧ್ಯಕ್ಷ ಡಿ. ರಾಮೇಗೌಡ ಕಲ್ಲಹಳ್ಳಿ ತಿಳಿಸಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ತಾಲ್ಲೂಕು ಸಮಿತಿ ಪದಾಧಿಕಾರಿಗಳು ಸಭೆ ಸೇರಿ ನನ್ನನ್ನು ತಾಲ್ಲೂಕು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಜಿಲ್ಲಾಧ್ಯಕ್ಷರು ತಾಲ್ಲೂಕು ಅಧ್ಯಕ್ಷರ ಆಯ್ಕೆ ಕಾನೂನು ಬಾಹಿರವೆಂದು ಹೇಳಿಕೆ ಕೊಡುವ ಮೂಲಕ ಹೊಸದಾಗಿ ನೂತನ ಸಮಿತಿಯನ್ನು, ಅಧ್ಯಕ್ಷರನ್ನು ಆಯ್ಕೆ ಮಾಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿರುವುದು ಹಾಸ್ಯಸ್ಪದವಾಗಿದೆ ಎಂದು ಹೇಳಿದರು.
ಮೇ.27 ರಂದು ತಾಲ್ಲೂಕು ಸಮಿತಿ ಪದಾಧಿಕಾರಿಗಳು ತಾಲ್ಲೂಕು ಅಧ್ಯಕ್ಷರ ಆಯ್ಕೆ ಕಾನೂನುಬದ್ಧವಾಗಿರುತ್ತದೆ. ಅಂದಿನಿಂದ ಮೂರು ದಿನಗಳ ಅಂತರದಲ್ಲಿ ತಾಲ್ಲೂಕು ಸಮಿತಿಯನ್ನು ವಜಾ ಮಾಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರ ಗುಂಪು ಹೇಳಿಕೆ ನೀಡಿರುವುದು ಸಂಘದ ಸಿದ್ಧಾಂತ, ಸಂಘದ ಬೈಲಾ ಮತ್ತು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರ ನಡವಳಿಕೆಗಳನ್ನು ಮತ್ತು ಸರ್ವಾಧಿಕಾರಿ ಧೋರಣೆಯನ್ನು ಸಹಿಸದ ಚಿಕ್ಕಮಗಳೂರು ತಾಲ್ಲೂಕು ಸಮಿತಿಯು ರಾಜ್ಯ ವರಿಷ್ಠ ಕೆ.ಕೆ. ಕೃಷ್ಣೇಗೌಡ ಉಪಸ್ಥಿತಿಯಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮತ್ತು ಅವರ ಗುಂಪನ್ನು ಬಹಿಷ್ಕರಿಸಲಾಗಿದೆ. ಅವರು ತೆಗೆದುಕೊಳ್ಳುವ ಕಾನೂನುಬಾಹಿರ ನಿರ್ಣಯಗಳು ಮತ್ತು ನೀಡುವ ಮನಪೆÇೀಲಿ ಹೇಳಿಕೆಗಳು ತಾಲ್ಲೂಕು ಸಮಿತಿಗೆ ಅನ್ವಯಿಸುವುದಿಲ್ಲ ಎಂದು ಹೇಳಿಕೆ ನೀಡಲಾಗಿತ್ತು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷರು ಚಿಕ್ಕಮಗಳೂರು ತಾಲ್ಲೂಕು ಸಮಿತಿಯನ್ನು ವಜಾಗೊಳಿಸಲು ಇರುವ ಅಧಿಕಾರ, ಮರು ಆಯ್ಕೆಗೊಳಿಸುವ ಬಗ್ಗೆಯಾಗಲಿ ಯಾವುದೇ ಕಾನೂನುಬದ್ಧ ದಾಖಲೆಗಳನ್ನು ಮಾಧ್ಯಮದ ಮುಂದೆ ಹಾಜರುಪಡಿಸಿರುವುದಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೂ ಆಹ್ವಾನಿಸಿದ್ದು, ಚರ್ಚೆಗೆ ಹಾಜರಾಗದೆ ಪಲಾಯನ ಮಾಡಿದ್ದಾರೆ ಎಂದು ದೂರಿದರು.
ತಾಲ್ಲೂಕು ಸಮಿತಿಯಲ್ಲಿ ಪದಾಧಿಕಾರಿಯಾಗಿರುವ ಸಂಘದ ಕಾರ್ಯಕರ್ತರು ಅನೇಕ ವರ್ಷಗಳ ಕಾಲ ಕಾರ್ಯಕರ್ತರಾಗಿ ದುಡಿದು ಸಂಘಕ್ಕೆ ಕೊಡುಗೆ ನೀಡಿದ್ದಾರೆ. ಈ ರೀತಿ ಅವರನ್ನು ಸಕಾರಣಗಳಿಲ್ಲದೆ ಕಾರಣ ಕೇಳದೆ ರಾಜ್ಯಾಧ್ಯಕ್ಷರ ಆದೇಶ ಎಂದು ನೆಪ ಹೇಳಿ ವಜಾಗೊಳಿಸಿರುವುದಾಗಿ ಮಾಧ್ಯಮಗಳ ಮೂಲಕ ಹೇಳಿಕೆ ನೀಡುವ ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರ ಆದೇಶವನ್ನು ಹಾಜರುಪಡಿಸಲಿ ಎಂದು ಸವಾಲು ಹಾಕಿದರು.
ಜಿಲ್ಲಾಧ್ಯಕ್ಷರು ಆಯ್ಕೆ ಮಾಡಿರುವ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಸಂಘದ ಕಾರ್ಯಕರ್ತರಾಗಿ ಎರಡು ವರ್ಷ ತುಂಬಿರುವುದಿಲ್ಲ. ಅದರಲ್ಲಿ ಕೆಲವರು ಸಂಘದ ಸದಸ್ಯರಾಗಿ ಮೂರು ತಿಂಗಳು ಸಹ ತುಂಬಿರುವುದಿಲ್ಲ. ಇದು ಸಂಘದ ಸಿದ್ಧಾಂತದ ಮತ್ತು ಬೈಲಾದ ಸ್ಪಷ್ಟ ಉಲ್ಲಂಘನೆ ಮತ್ತು ಕಾನೂನು ಬಾಹಿರವಾಗಿದೆ. ರಾಜ್ಯಾಧ್ಯಕ್ಷರು ತಕ್ಷಣ ಮಧ್ಯೆ ಪ್ರವೇಶಿಸಿ, ಜಿಲ್ಲಾಧ್ಯಕ್ಷರ ಸರ್ವಾಧಿಕಾರಿ ಧೋರಣೆಯ ಬಗ್ಗೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷರನ್ನು ಈಗಾಗಲೇ ಬಹಿರಂಗವಾಗಿ ಬಹಿಷ್ಕರಿಸಿದ್ದೇವೆ. ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಮಾಡಿರುವ ತಾಲ್ಲೂಕು ಸಮಿತಿ ಅಧ್ಯಕ್ಷರು ಮತ್ತು ಸಮಿತಿಯ ಆಯ್ಕೆ ಕಾನೂನುಬಾಹಿರವಾಗಿದೆ. ಅಧಿಕೃತವಾಗಿ ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷರಾಗಿ ನಾನೇ ಮುಂದುವರೆಯುತ್ತೇನೆ. ನನ್ನನ್ನು ಆಯ್ಕೆ ಮಾಡಿರುವ ಸಮಿತಿಯೇ ತಾಲ್ಲೂಕಿನ ಕ್ರಮಬದ್ಧ ಸಮಿತಿಯಾಗಿರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಗೌರವಾಧ್ಯಕ್ಷ ಎಂ.ಮಲ್ಲುoಡಪ್ಪ, ಉಪಾಧ್ಯಕ್ಷ ಪರ್ವತೇಗೌಡ, ನಿರ್ದೇಶಕ ಕೆ.ಎಂ.ಜಯರಾಮೇಗೌಡ, ಮುಖಂಡರಾದ ಚಂದ್ರಶೇಖರ್, ಕಾಂತರಾಜ್, ಆನಂದ್ ಮತ್ತಿತರರು ಉಪಸ್ಥಿತರಿದ್ದರು.



