ಅಕಾಲಿಕವಾಗಿ ಅಗಲಿದ ಯುವ ನಾಯಕ, ಗೋಣಿಬೀಡು ಹೋಬಳಿ ಬಿಜೆಪಿ ಮಾಜಿ ಅಧ್ಯಕ್ಷ ಹೆಚ್.ಕೆ. ಭರತ್ ಕನ್ನೇಹಳ್ಳಿ ಅವರ ಅಕಾಲಿಕ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ವ್ಯಕ್ತಿತ್ವ ಮತ್ತು ಸಾಮಾಜಿಕ ಕಾಳಜಿ ಅನುಕರಣೀಯ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಭರತ್ ಕನ್ನೇಹಳ್ಳಿ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭರತ್ ಅವರು ಅನೇಕ ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಹಿಂದೂ ಧರ್ಮದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಮೂಡಿಗೆರೆ ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿ ಪದಾಧಿಕಾರಿಯಾಗಿ ಬಹಳ ವರ್ಷಗಳಿಂದ ಆಸಕ್ತಿಯಿಂದ ಕೆಲಸ ಮಾಡಿದ್ದರು. ಬಹಳ ಚುರುಕಿನ ವ್ಯಕ್ತಿತ್ವ ಹೊಂದಿದ್ದರು. ಅವರು ಇಷ್ಟು ಬೇಗ ನಮ್ಮನ್ನಗಲಿದ್ದು ಅರಗಿಸಿಕೊಳ್ಳಲು ಬಹಳ ಕಷ್ಟವಾದ ಸಂಗತಿ. ಅವರ ಅಗಲಿಕೆಯಿಂದ ಅವರ ಕುಟುಂಬಕ್ಕೆ ಆಗಿರುವ ನಷ್ಟ ಮತ್ತು ನೋವನ್ನು ಭರಿಸಲು ಸಾಧ್ಯವಿಲ್ಲ. ಭರತ್ ಅವರ ನೆನಪು ಸದಾ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿರಲಿದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿಯವರು ಮಾತನಾಡಿ ; ಭರತ್ ಭರತ್ ಅತ್ಯಂತ ಸರಳ ಹಾಗೂ ನೇರ ನಡೆನುಡಿಯ ವ್ಯಕ್ತಿತ್ವದವಾಗಿದ್ದರು. ಯಾವುದೇ ಸಂದರ್ಭದಲ್ಲಿ ಎಂತಹುದೇ ಸಮಸ್ಯೆಗಳು ಎದುರಾದರೂ ಎದೆಗುಂದದೇ ಮುಂದೆ ನಿಂತು ಎದುರಿಸುವಂತಹ ಛಾತಿ ಹೊಂದಿದ್ದರು. ಕಷ್ಟ ಎಂದವರ ನೆರವಿಗೆ ಬರುತ್ತಿದ್ದರು. ಸ್ನೇಹಜೀವಿಯಾಗಿದ್ದರು. ಅವರ ಅಗಲಿಕೆ ಅತೀವ ನೋವನ್ನುಂಟುಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಸೇರಿದಂತೆ ವಿವಿಧ ಪಕ್ಷಗಳ, ಸಂಘಟನೆಗಳ ಮುಖಂಡರು ಮಾತನಾಡಿದರು.
ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು, ಭರತ್ ಅವರ ಕುಟುಂಬ ವರ್ಗದವರು, ಬಂಧುಗಳು ಪುಷ್ಪನಮನ ಸಲ್ಲಿಸಿದರು.
ವಿನೋದ್ ಕಣಚೂರು ಕಾರ್ಯಕ್ರಮ ನಿರೂಪಿಸಿದರು



