ಮೂಡಿಗೆರೆಯಿಂದ ಸಕಲೇಶಪುರಕ್ಕೆ ಪ್ರತಿದಿನ ಸಂಚರಿಸುವ ಕೆಎಸ್ಆರ್ ಟಿಸಿ ಬಸ್ ಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರಿಗೆ ತೀವ್ರ ತರದ ತೊಂದರೆಯಾಗಿದೆ ಇಂತಹ ಗುಜರಿ ಬಸ್ ಗಳನ್ನು ಸಂಚಾರಕ್ಕೆ ಬಿಡದೆ ಸುಸ್ಥಿತಿಯಲ್ಲಿರುವ ಬಸ್ ಗಳನ್ನು ಸಂಚಾರಕ್ಕೆ ಬಿಡುವಂತೆ ಕಿರುಗುಂದ ಗ್ರಾಪಂ ಮಾಜಿ ಅಧ್ಯಕ್ಷೆ ಸ್ವಾತಿಶ್ರೀ ಒತ್ತಾಯಿಸಿದ್ದಾರೆ.
ಪ್ರತಿದಿನ ನಾಲ್ಕೈದು ಬಸ್ ಗಳು ಮೂಡಿಗೆರೆ-ಸಕಲೇಶಪುರ ಮಾರ್ಗದಲ್ಲಿ ನಿರಂತರವಾಗಿ ಸಂಚರಿಸುತ್ತದೆ. ಈ ಬಸ್ ಗಳು ಪ್ರತಿದಿನ ಅಲ್ಲಲ್ಲಿ ಕೆಟ್ಟು ನಿಲ್ಲುವುದು ರೂಢಿಯಾಗಿದೆ. ದಾರಿ ಮಧ್ಯೆ ಕೆಟ್ಟು ನಿಂತಾಗ ಪ್ರಯಾಣಿಕರನ್ನು ಬೇರೆ ಬಸ್ಸಿಗೆ ಕಳಿಸಬೇಕಾಗುತ್ತದೆ. ಬೇರೆ ಬಸ್ ಬರಲು ತಾಸುಗಟ್ಟಲೆ ಕಾಲ ರಸ್ತೆಯಲ್ಲಿ ಕಾಯಬೇಕಾದ ದುಸ್ಥಿತಿಯಿದೆ. ವಿದ್ಯಾರ್ಥಿಗಳು ಬೇರೆ ಬಸ್ಸಿಗಾಗಿ ರಸ್ತೆಯಲ್ಲಿ ಕಾಯುತ್ತಿದ್ದರೆ ಶಾಲೆ-ಕಾಲೇಜಿಗೆ ಹೋಗಲು ತಡವಾಗುತ್ತದೆ. ರೋಗಿಗಳು, ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ರಸ್ತೆಯಲ್ಲೆ ಕಾಲ ಕಳೆಯ ಬೇಕಾಗಿದೆ. ಒಂದು ವಾರದಲ್ಲಿ 3 ಬಸ್ ಗಳು ಅಲ್ಲಲ್ಲಿ ಕೆಟ್ಟು ನಿಂತು ಪ್ರಯಾಣಿಕರಿಗೆ ಇನ್ನಿಲ್ಲದ ತೊಂದರೆ ನೀಡಿದೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ಇಂತಹ ಗುಜರಿ ಬಸ್ ಗಳನ್ನು ಸಂಚಾರಕ್ಕೆ ಬಿಟ್ಟು ಪ್ರಯಾಣಿಕರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಗುರುವಾರ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಸಂಸ್ಥೆಗೆ ಉತ್ತಮ ಆದಾಯ ತರುವ ಅಂತರ ತಾಲೂಕಿಗೆ ಸಂಚರಿಸುವ ಬಸ್ ಗಳನ್ನು ಕೆಎಸ್ಆರ್ ಟಿಸಿ ಘಟಕದಲ್ಲಿ ದುರಸ್ತಿಪಡಿಸದೆ ಸಂಚಾರಕ್ಕೆ ಬಿಡುವುದು ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ. ಬಸ್ ಗಳು ಅಲ್ಲಲ್ಲಿ ಕೆಟ್ಟು ನಿಂತಾಗ ಬೇರೆ ಬಸ್ ಗಳನ್ನು ಸಂಚಾರಕ್ಕೆ ಬಿಡುತ್ತಿಲ್ಲ. ಇದರಿಂದ ಮೂಡಿಗೆರೆ ಮತ್ತು ಸಕಲೇಶಪುರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಹಳೆಯ ಬಸ್ ಗಳನ್ನು ಸಂಚಾರಕ್ಕೆ ಬಿಡದೆ ಸುಸ್ಥಿತಿಯಲ್ಲಿರುವ ಗುಣಮಟ್ಟದ ಬಸ್ ಗಳನ್ನು ಸಂಚಾರಕ್ಕೆ ಬಿಡುವಂತೆ ಒತ್ತಾಯಿಸಿದ್ದಾರೆ.



