ಮೂಡಿಗೆರೆ, ಬಣಕಲ್ ಕಾಲೇಜುಗಳ ಅತಿಥಿ ಉಪನ್ಯಾಸಕರು ಒಟ್ಟಾಗಿ ಮೂಡಿಗೆರೆ ಕ್ಷೇತ್ರದ ಶಾಸಕರಾದ ಶ್ರೀಮತಿ ನಯನ ಮೋಟಮ್ಮನವರನ್ನು ಭೇಟಿ ಮಾಡಿ ತಮ್ಮ ವೇತನ ಹೆಚ್ಚಳ, ಸೇವಾ ಭದ್ರತೆ, ಇತ್ಯಾದಿ ಸಮಸ್ಯೆಗಳ ಕುರಿತು ಮನವಿ ಪತ್ರ ನೀಡಿ ವಿಧಾನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಮನವಿ ಮಾಡಿದರು.
ಪ್ರತಿ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಸೇವೆಯಿಂದ ಬಿಡುಗಡೆಗೊಳಿಸುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಮೆರಿಟ್ ಪದ್ದತಿಯ ಮೇಲೆ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು, ಈ ಪದ್ಧತಿಯನ್ನು ಕೈಬಿಟ್ಟು ಈ ಹಿಂದೆ ಸೇವೆ ಸಲ್ಲಿಸಿದ ಸೇವಾ ಅನುಭವವುಳ್ಳ ಅತಿಥಿ ಉಪನ್ಯಾಸಕರನ್ನು ಮುಂದುವರೆಸುವಂತೆ ಸೂಕ್ತ ಕ್ರಮವನ್ನು ಕೈಗೊಳ್ಳುವುದು.
2. ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರು, ಸೇವೆ ಸಲ್ಲಿಸಿದ ಅವಧಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ ಕೃಪಾಂಕವನ್ನು ನೀಡುವಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ವಿನಂತಿಸುತ್ತೇವೆ.
3. ಪ್ರತಿ ವಿಷಯದಲ್ಲಿ ವಾರದಲ್ಲಿ 10-12 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರವಿದ್ದಲ್ಲಿ ಇಬ್ಬರು ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಬಹುದು ಎಂದು ಆದೇಶವಿದ್ದು, ಈ ಆದೇಶ ಉಲ್ಲಂಘನೆ ಆಗುತ್ತಿದ್ದು, ಈ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಕ್ತ ಕ್ರಮವನ್ನು ಕೈಗೊಳ್ಳುವುದು.
4. ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಪ್ರಸ್ತುತ 10 ತಿಂಗಳ ಮಾಸಿಕ ಗೌರವಧನ ನಿಗಧಿಪಡಿಸಿದ್ದು, ಇದನ್ನು ವರ್ಷದ 12 ತಿಂಗಳು ಸಹ ನೀಡುವಂತೆ ಸೂಕ್ತ ಕ್ರಮವನ್ನು ವಹಿಸುವುದು.
5. ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಸೇವಾ ಪ್ರಮಾಣ ಪತ್ರವನ್ನು ನೀಡುವಂತೆ ವಿನಂತಿಸುತ್ತೇವೆ. ಹಾಗೂ ಗುರುತಿನ ಚೀಟಿ, ತಿಂಗಳಿಗೆ ಒಂದು ರಜೆ ನೀಡುವಂತೆ ಸೂಕ್ತ ಕ್ರಮವನ್ನು ಕೈಗೊಳ್ಳುವುದು ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಮುಂದಿಟ್ಟು ಶಾಸಕರಿಗೆ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕರಿಂದ ಮನವಿ ಸ್ವೀಕರಿಸಿದ ಶಾಸಕಿ ನಯನ ಮೋಟಮ್ಮ ಸಮಸ್ಯೆಗಳ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.



