ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರು ಆಗಸ್ಟ್ 16ರ ಒಳಗೆ E-KYC ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗುತ್ತಿದೆ. ಗೃಹ ಬಳಕೆಯ LPG ಸಂಪರ್ಕ ಹೊಂದಿರುವ ಪ್ರತಿಯೊಬ್ಬ ಗ್ರಾಹಕರೂ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ತೈಲ ಕಂಪನಿಗಳು ಹಾಗೂ ಗ್ಯಾಸ್ ವಿತರಕರು ಮನವಿ ಮಾಡುತ್ತಿದ್ದಾರೆ.
ಗ್ರಾಹಕರ ಮಾಹಿತಿಯನ್ನು ಪರಿಶೀಲಿಸುವುದು, ದಾಖಲೆಗಳನ್ನು ಅಪ್‌ಡೇಟ್ ಮಾಡುವುದು ಹಾಗೂ ನಿಜವಾದ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ E-KYC ಪ್ರಕ್ರಿಯೆ ನಡೆಸಲಾಗುತ್ತಿದೆ. ಈಗಾಗಲೇ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಡೆಡ್‌ಲೈನ್ ನೀಡಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಇದೀಗ ಆಗಸ್ಟ್ 16ರವರೆಗೆ ಗಡುವನ್ನು ವಿಸ್ತರಿಸಿದೆ.
ಆಗಸ್ಟ್ 16ರ ಬಳಿಕವೂ E-KYC ಮಾಡಿಸದಿದ್ದರೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ನಿರ್ಬಂಧಿಸುವ ಅಥವಾ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಗ್ಯಾಸ್ ವಿತರಕರು ತಿಳಿಸಿದ್ದಾರೆ.
ಸದ್ಯ ಸಬ್ಸಿಡಿ ದರದಲ್ಲಿ ದೊರೆಯುತ್ತಿರುವ ಗೃಹ ಬಳಕೆಯ ಸಿಲಿಂಡರ್‌ನ ಬೆಲೆ ಸುಮಾರು 945 ರೂ. ಇದೆ. ಆದರೆ E-KYC ಮಾಡಿಸದ ಗ್ರಾಹಕರು ಸಬ್ಸಿಡಿ ಸೌಲಭ್ಯ ಕಳೆದುಕೊಂಡರೆ, ಅದೇ ಸಿಲಿಂಡರ್‌ಗೆ ಮಾರುಕಟ್ಟೆ ದರದಂತೆ ಸುಮಾರು 2,108 ರೂ. ಪಾವತಿಸಬೇಕಾಗಬಹುದು ಎಂದು ವಿತರಕರು ತಿಳಿಸಿದ್ದಾರೆ.
ಹೀಗಾಗಿ ಗ್ರಾಹಕರು ಆಗಸ್ಟ್ 16ರೊಳಗೆ ತಮ್ಮ ಸಮೀಪದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ E-KYC ಮಾಡಿಸಿಕೊಳ್ಳಬಹುದು. ಇಲ್ಲವೇ ಲಭ್ಯವಿರುವ ಅಧಿಕೃತ ಆನ್‌ಲೈನ್ ಅಥವಾ ಮೊಬೈಲ್ ಸೇವೆಯ ಮೂಲಕವೂ E-KYC ಪೂರ್ಣಗೊಳಿಸಿಕೊಳ್ಳಬಹುದು.
E-KYC ಪ್ರಕ್ರಿಯೆ ಹಾಗೂ ಗಡುವಿನ ಕುರಿತು ಗ್ರಾಹಕರು ಕೇಂದ್ರ ಸರ್ಕಾರ, ಸಂಬಂಧಪಟ್ಟ ತೈಲ ಕಂಪನಿ ಅಥವಾ ಅಧಿಕೃತ ಗ್ಯಾಸ್ ವಿತರಕರಿಂದಲೇ ಮಾಹಿತಿ ಪಡೆದು ಖಚಿತಪಡಿಸಿಕೊಳ್ಳಬೇಕು. ಯಾವುದೇ ಅನಧಿಕೃತ ಲಿಂಕ್‌ಗಳಿಗೆ ವೈಯಕ್ತಿಕ ಮಾಹಿತಿ ಅಥವಾ OTP ನೀಡಬಾರದು ಎಂದು ಕೇಳಿಕೊಳ್ಳಲಾಗಿದೆ.
- ಮೊಬೈಲ್ ಆಪ್: ಇಂಡೇನ್ ಗ್ಯಾಸ್‌ಗಾಗಿ
IndianOil ONE App, ಭಾರತ್ ಗ್ಯಾಸ್‌ಗಾಗಿHello BPCLಹಾಗೂ ಎಚ್‌ಪಿ ಗ್ಯಾಸ್‌ಗಾಗಿHP Payಆಪ್ ಬಳಸಿ ಮನೆಯಲ್ಲೇ ಮುಖದ ದೃಢೀಕರಣ (Face Authentication) ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು.
- ಗ್ಯಾಸ್ ವಿತರಕರು: ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಮುಖಾಂತರ ಪರಿಶೀಲನೆ ಪೂರ್ಣಗೊಳಿಸಿ.
- ಸಿಲಿಂಡರ್ ಡೆಲಿವರಿ ಸಿಬ್ಬಂದಿ: ಗ್ಯಾಸ್ ವಿತರಣೆಗೆ ಬರುವ ಸಿಬ್ಬಂದಿ ಬಳಿ ಇರುವ ಬಯೋಮೆಟ್ರಿಕ್ ಸಾಧನದ ಮೂಲಕವೂ ಬೆರಳಚ್ಚು ನೀಡಿ ಇದನ್ನು ಮುಗಿಸಬಹುದು.


