ಕಾಡು ಮತ್ತು ವನ್ಯಜೀವಿಗಳ ಸಂರಕ್ಷಣೆ ಕೇವಲ ಸರಕಾರದ ಜಬಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರೀಕನ ಕರ್ತವ್ಯವೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಬುಧವಾರ ಪಟ್ಟಣದ ಬೆಥನಿ ಶಾಲೆಯಲ್ಲಿ ಚಿಕ್ಕಮಗಳೂರು ಅರಣ್ಯ ವಿಭಾಗದಿಂದ ಏರ್ಪಡಿಸಿದ್ದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇವರು ಪ್ರಪಂಚ ಸೃಷ್ಟಿ ಮಾಡಿರುವುದು ಮಾನವ ಸೇರಿದಂತೆ ಎಲ್ಲಾ ಪ್ರಾಣಿ, ಜೀವಜಂತುಗಳು ಸಮಾನವಾಗಿ ಜೀವಿಸುವಂತಾಗಬೇಕೆಂದು. ಆದರೆ ಮಾನವನ ಸ್ವಾರ್ಥಕ್ಕಾಗಿ ಕಾಡು, ಪರಿಸರ ಹಾನಿ ಮಾಡುತ್ತಿರುವುದರಿಂದ ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಆಗಮಿಸುತ್ತಿವೆ. ಪ್ರಾಣಿಗಳು ಬದುಕುವಂತೆ ಪರಿಸರದಲ್ಲಿ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ಹೇಳಿದರು.
ಹುಲಿ, ಸಿಂಹಗಳನ್ನು ಹೋಲಿಕೆ ಮಾಡಿದರೆ ಕಾಡಾನೆಗಳ ಗಾತ್ರ ದೊಡ್ಡದಾಗಿದ್ದರೂ ಅದೊಂದು ಸಾದು ಪ್ರಾಣಿ. ಕಾಡು ನಾಶದಿಂದಾಗಿ ಕಾಡಾನೆಗಳು ಗ್ರಾಮಗಳಲ್ಲಿರುವ ತೋಟಗಳಿಗೆ ಆಹಾರ ಹರಸಿ ಬರುತ್ತಿವೆ. ಬೆಳೆನಾಶದ ಜತೆಗೆ ಸಾವು ನೋವು ಸಂಭವಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಮಾನವನ ಸ್ವಾರ್ಥ ಬದುಕು. ಮಾನವನ ಬದುಕು ಪ್ರಕೃತಿಯೊಂದಿಗೆ ಅವಿನಾಭಾವ ಸಂಬAಧ ಹೊಂದಿದೆ. ಪ್ರಾಣಿಗಳು ಹಾಗೂ ಜೀವಜಂತುಗಳು ರಕ್ಷಿಸಿದಾಗ ಮಾತ್ರ ಪರಿಸರ ಸಮತೋಲನ ಕಾಪಾಡಲು ಸಾಧ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಏರ್ಪಡಿಸಿದ್ದ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಡಾನೆ ಸ್ಥಳಾಂತರಿಸಲು ಹೆಚ್ಚು ಶ್ರಮಿಸುತ್ತಿರುವ ಅರಣ್ಯ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನು ಬೆಥನಿ ಶಾಲೆ ಕೊಠಡಿಯಲ್ಲಿ ಕಾಡುಪ್ರಾಣಿಗಳು ಹಾಗೂ ಪರಿಸರ ರಕ್ಷಣೆ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ವಸ್ತುಪ್ರದರ್ಶನ ಉದ್ಘಾಟಿಸಿದರು.
ಭಾರತೀಯ ಅರಣ್ಯ ಸೇನೆ ಸಿಎಫ್ ಯಶ್‌ಪಾಲ್ ಕ್ಷೀರಸಾಗರ್, ಸಾಮಜಿಕ ಅರಣ್ಯ ವಿಭಾಗದ ಡಿಸಿಎಫ್ ಕೆ.ಸಿ.,ಆನಂದ್, ಡಿಸಿಎಫ್ ಕೆ.ಟಿ.ಬೋರಯ್ಯ, ಕಾರ್ಯಯೋಜನೆ ಡಿಸಿಎಫ್ ಸೈಯದ್ ಹುಸೇನ್, ಎಸಿಎಫ್ ಆಕರ್ಷ್, ಅರಣ್ಯ ಕಾರ್ಯಪಡೆಯ ಎಸಿಎಫ್ ಮಲ್ಲಿಕಾರ್ಜುನ, ಡಬ್ಯೂಡಬ್ಲೂ ಸಂಸ್ಥೆಯ ರಾಹುಲ; ದ್ರಾವಿಡ್, ಶಾಲೆ ಪ್ರಾಂಶುಪಾಲೆ ಭಕ್ತಿ ಪ್ರಭಾ ಸೇರಿದಂತೆ ವಿವಿಧ ತಾಲೂಕಿನ ಆರ್‌ಎಫ್‌ಒ, ಡಿಆರ್‌ಎಫ್‌ಒ ಉಪಸ್ಥಿತರಿದ್ದರು.


