ಕರ್ನಾಟಕ ಹೌಸಿಂಗ್ ಬೋರ್ಡ್ ಚಿಕ್ಕಮಗಳೂರು ವತಿಯಿಂದ ಮೂಡಿಗೆರೆ ಸಮೀಪದ ಹಳೆಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ನಿವೇಶನಗಳು ಪಾರದರ್ಶಕವಾಗಿ ಹಂಚಿಕೆ ಮಾಡಿಲ್ಲವೆಂದು ಹ್ಯೂಮನ್ ರೈಟ್ಸ್ ಅಸೋಸಿಯೇಷನ್‍ನ ಜಿಲ್ಲಾಧ್ಯಕ್ಷ ರಾಮಚಂದ್ರ ದೂರಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2009ರಲ್ಲಿ ನಿವೇಶನಕ್ಕಾಗಿ ತಾಲೂಕಿನ ಹಳೇಮೂಡಿಗೆರೆ ಗ್ರಾ.ಪಂ. ವ್ಯಾಪ್ತಿ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿಗೆ ಜನರಿಗೆ 20×30 ಅಡಿ ವಿಸ್ತೀರ್ಣದ ನಿವೇಶನವೊಂದಕ್ಕೆ ಅಡಿವೊಂದಕ್ಕೆ 500 ರೂ ರಂತೆ ಹಣ ನಿಗದಿಪಡಿಸಿ, ಹೌಸಿಂಗ್ ಬೋರ್ಡ್ ಚಿಕ್ಕಮಗಳೂರು ವತಿಯಿಂದ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲಾಗಿತ್ತು. ನಿವೇಶನ 18 ತಿಂಗಳಲ್ಲಿ ನೀಡುವುದಾಗಿ ತಿಳಿಸಿದ್ದು, ಒಂದು ವೇಳೆ ನಿವೇಶನ ಹಂಚಿಕೆ ಮಾಡದಿದ್ದರೆ ಬಡ್ಡಿ ಸಹಿತ ಹಣ ಪಾಪಾಸು ನೀಡಲಾಗುವುದು ಎಂದು ಹೇಳಿದ್ದರು.
ಆದರೆ ಸಮಯಕ್ಕೆ ಸರಿಯಾಗಿ ನಿವೇಶನ ನೀಡಲಿಲ್ಲ. ಹಾಗಾಗಿ ಠೇವಣಿ ಹಣ ಯಾರು ವಾಪಾಸು ಪಡೆಯುವುದಿಲ್ಲವೋ ಅಂತವರಿಗೆ ಮುಂದಿನ ದಿನದಲ್ಲಿ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರಿಂದ ನಾವು ಠೇವಣಿ ಹಣ ವಾಪಾಸು ಪಡೆಯಲಿಲ್ಲ. ಇದೀಗ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಮುಂದಾಗಿದ್ದು, ಆ ನಿವೇಶನಗಳ ಆಕಾರ ಸರಿಯಿಲ್ಲ. ಅಲ್ಲದೇ 2009 ರಲ್ಲಿ ನಿಗದಿಪಡಿಸಿದ ದರಕ್ಕಿಂತ ಎರಡೂವರೆ ಪಟ್ಟು ಅಧಿಕ ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ತಾಲೂಕು ಅಧ್ಯಕ್ಷ ಜಗದೀಶ್ ಗೋಣಿಬೀಡು ಮಾತನಾಡಿ, ಅಂದು ನಿಗದಿಪಡಿಸಿದ್ದ ಅಡಿವೊಂದಕ್ಕೆ 500 ರೂ, ಇದೀಗ 1300 ರೂಗೆ ಏರಿಕೆ ಮಾಡಲಾಗಿದ್ದು, ಬಾಕಿ ಹಣ 4 ಕಂತುಗಳಲ್ಲಿ ಕಟ್ಟಬೇಕು. ಇಲ್ಲವಾದರೆ ಈ ಹಿಂದೆ ಪಾವತಿಸಿದ ಹಣ ವಾಪಸ್ ನೀಡುವುದಿಲ್ಲವೆಂದು ಒತ್ತಡ ಹಾಕುತ್ತಿದ್ದಾರೆ. ಅಲ್ಲದೇ ನಿವೇಶನದ ಪರಿಸರದ ಸ್ಥಳ ಉಪಯೋಗಕ್ಕೆ ಬಾರದಂತಿದೆ. ರಸ್ತೆಗಳ ಗುಣಮಟ್ಟವೂ ಸರಿಯಿಲ್ಲ. ಉತ್ತಮ ರಸ್ತೆ ಹಾಗೂ ಮೂಲಭೂತ ಸೌಕರ್ಯ ಒದಗಿಸಿ, ಸಬ್ ರಿಜಿಸ್ಟಾರ್ ಕಚೇರಿಯಲ್ಲಿನ ಮೌಲ್ಯ ಆಧರಿಸಿ ಸೂಕ್ತ ದರ ನಿಗದಿ ಪಡಿಸಿ, ಹೌಸಿಂಗ್ ಬೋರ್ಡ್ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಇಲ್ಲವಾದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಜಿಕಾವುಲ್ಲಾ, ಕಾರ್ಯದರ್ಶಿ ಶ್ರೀಕಾಂತ್‍ರಾಜ್ ಸಹ ಕಾರ್ಯದರ್ಶಿ ಮಡ್ಡಿಕೆರೆ ಮಂಜುನಾಥ್, ಕುಮಾರ್, ಸಿ.ಪಿ.ರವಿ, ಕಾಂತ್‍ರಾಜ್, ಗಂಗಾಧರ್‍ಶೆಟ್ಟಿ, ಪ್ರಶಾಂತ್, ಮಾಧವ, ಲೋಹಿತ್, ಗೋಪಿ, ವಿಶ್ವನಾಥ್, ಪ್ರವೀಣ್, ವನಜಾಕ್ಷಿ ಮತ್ತಿತರರಿದ್ದರು.


