ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಪಡೆಯುತ್ತಿರುವ ಫಲಾನುಭವಿಗಳ ಆದಾಯದ ಮಿತಿಯನ್ನು ಹೆಚ್ಚಿಸಿ ಪಿಂಚಣಿ ಮಂಜೂರು ಮಾಡಿರುವ ರಾಜ್ಯ ಸರ್ಕಾರಕ್ಕೆ ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಪಿಂಚಣಿ ರದ್ದಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಅಧಿವೇಶನದಲ್ಲಿ ಉತ್ತರ ಕೋರಿ ವಿಧಾನಸಭೆಯ ಕಾರ್ಯದರ್ಶಿಗಳಿಗೆ ಆಗಸ್ಟ್ 6 ರಂದು ಲಿಖಿತವಾಗಿ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಸಂಬಂಧಿಸಿದಂತೆ ಆಗಸ್ಟ್ 17 ರಂದು ಸದನದಲ್ಲಿ ಉತ್ತರ ನೀಡುವ ಜತೆಗೆ ಮರು ದಿನವೇ ಆದೇಶ ಹೊರಡಿಸಿರುವ ರಾಜ್ಯದ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಪಿಂಚಣಿಯಡಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಯಾಪ್ಯ ವೇತನ, ಅಂಗವಿಕಲ ವೇತನ ಫಲಾನುಭವಿಗಳಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂದೇಹಾಸ್ಪದ ಎಂದು ಗುರುತಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದಿಯಾ, ಬಂದಿದ್ದರೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಸಂಬಂಧಿಸಿದಂತೆ ಸದನದಲ್ಲಿ ರಾಜ್ಯದ ಕಂದಾಯ ಸಚಿವರು ಲಿಖಿತವಾಗಿ ಉತ್ತರ ನೀಡಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 15,643 ಸಂದೇಹಾಸ್ಪದ ಫಲಾನುಭವಿಗಳು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ 23,14,544 ಫಲಾನುಭವಿಗಳು ಗುರುತಿಸಲಾಗಿದೆ. ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯ ಜೊತೆಗೆ ?ಕುಟುಂಬ? ತಂತ್ರಾಂಶದಿಂದ ಪಡೆದ ದತ್ತಾಂಶಗಳನ್ನು ಸಂಯೋಜಿಸಿದಾಗ 23,14,544 ಫಲಾನುಭವಿಗಳು ಸಂದೇಹಾಸ್ಪದವೆಂದು ಕಂಡುಬಂದಿತ್ತು. ಈ ಫಲಾನುಭವಿಗಳ ಭೌತಿಕ ಸಂಯೋಜನೆ ಪರಿಶೀಲನೆಗಾಗಿ ಮೊಬೈಲ್ ಆಪ್ ಸಿದ್ಧಪಡಿಸಿ ಪರಿಶೀಲನೆ ನಡೆಸಲಾಗಿತ್ತು. ಈ ಸಮಯದಲ್ಲಿ ದಾಖಲಾತಿಗಳನ್ನು ಹಾಜರುಪಡಿಸದ, ನೀಡಿದ ವಿಳಾಸದಲ್ಲಿ ವಾಸ ಇಲ್ಲದೇ ಇದ್ದ ಮತ್ತು ಆದಾಯ ದೃಢೀಕರಣ ಪತ್ರ ಹಾಜರುಪಡಿಸದ 18,06,032 ಫಲಾನುಭವಿಗಳ ಪಿಂಚಣಿಯನ್ನು
ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಗ್ರಾಮ ಆಡಳಿತ ಅಧಿಕಾರಿಗಳು ಸಂಯೋಜನೆ ಮೊಬೈಲ್ ಆಪ್ ಮೂಲಕ ಪರಿಶೀಲಿಸಿದ ನಂತರ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರರಿಂದ ನಿಯಮ ಪ್ರಕಾರ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೀಡಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
23,14,544 ಸಂದೇಹಾಸ್ಪದ ಫಲಾನುಭವಿಗಳ ಭೌತಿಕ ಪರಿಶೀಲನಾ ಸಮಯದಲ್ಲಿ ಆದಾಯವು 32 ಸಾವಿರಕ್ಕಿಂತ ಹೆಚ್ಚಿರುವುದು ಕಂಡುಬಂದಿತ್ತು. ಈ ಫಲಾನುಭವಿಗಳ ಪೈಕಿ 32 ಸಾವಿರಕ್ಕಿಂತ ಹೆಚ್ಚು ಹಾಗೂ 1.20 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವ ಫಲಾನುಭವಿಗಳ ಪಿಂಚಣಿ ಮುಂದುವರಿಸುವಂತೆ ರಾಜ್ಯದ ಉಪ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ.
ಆದಾಯ ಮಿತಿಯ ಗೊಂದಲ
ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಪಡೆಯುತ್ತಿರುವ ಫಲಾನುಭವಿಗಳ ಆದಾಯದ ಮಿತಿಯನ್ನು 2021 ರಲ್ಲಿ 32 ಸಾವಿರ ರು.ಗಳಿಗೆ ನಿಗಧಿ ಪಡಿಸಲಾಗಿತ್ತು. ಇದರಿಂದಾಗಿ ಲಕ್ಷಾಂತರ ಜನರು ಪಿಂಚಣಿ ಸೌಲಭ್ಯದಿಂದ ಹೊರಗೆ ಉಳಿದಿದ್ದರು. ಈಗಿನ ನಮ್ಮ ಸರ್ಕಾರ ಆದಾಯದ ಮಿತಿಯನ್ನು 1.20 ಲಕ್ಷ ರು.ಗಳಿಗೆ ಹೆಚ್ಚಳ ಮಾಡಿದೆ. ಇದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕರು ಹೇಳಿದ್ದಾರೆ.
2021 ರಲ್ಲಿ ಆದಾಯದ ಮಿತಿಯನ್ನು ಹೆಚ್ಚಳ ಮಾಡಿದ್ದರೆ ಸಂದೇಹಾಸ್ಪದ ಗೊಂದಲ ಉಂಟಾಗುತ್ತಿರಲಿಲ್ಲ. ಫಲಾನುಭವಿಗಳ ಪಿಂಚಣಿ ತಡೆ ಹಿಡಿಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಈ ವಿಷಂiiದಲ್ಲಿ ಈಗಿನ ರಾಜ್ಯ ಸರ್ಕಾರ ಜನ ಪರ ನಿರ್ಧಾರ ಕೈಗೊಂಡಿರುವುದು ಅಭಿನಂದನೀಯ ಎಂದು ಹೇಳಿದ್ದಾರೆ.


