ರಾಜ್ಯದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಹೆಚ್ಚಿನ ವೇತನ ನೀಡಬೇಕು ಮತ್ತು ಅವರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಸದನದಲ್ಲಿ ಸರ್ಕಾರದ ಗಮನ ಸೆಳೆದರು.
ಗುರುವಾರ ವಿಧಾನಮಂಡಲದ ಸದನದಲ್ಲಿ ಚುಕ್ಕಿ ಗುರುತಿನ ಪ್ರಶ್ನೆಯ ಮೂಲಕ ಸರ್ಕಾರದ ಗಮನ ಸೆಳೆದ ನಯನಾ ಮೋಟಮ್ಮ, ಅತಿಥಿ ಉಪನ್ಯಾಸರಿಗೆ ಕನಿಷ್ಠ ವೇತನ ನೀಡಬೇಕು, ಅವರ ಸೇವಾ ಜೇಷ್ಠತೆ ಪರಿಗಣಿಸಬೇಕು. ಮಹಿಳಾ ಅತಿಥಿ ಶಿಕ್ಷಕಿಯರಿಗೆ ಹೆರಿಗೆ ರಜೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಬೇಕು ಎಂದು ಗಮನ ಸೆಳೆದರು. ಅತಿಥಿ ಶಿಕ್ಷಕರಿಗೆ ತೋಟದ ಕಾರ್ಮಿಕರಿಗಿಂತ ಕಡಿಮೆ ವೇತನ ನೀಡಲಾಗುತ್ತಿದೆ. ಅವರು ಉನ್ನತ ವ್ಯಾಸಾಂಗ ಮಾಡಿದ್ದು ಅವರಿಗೆ ಸೂಕ್ತ ವೇತನ ನೀಡಬೇಕು ಎಂದು ಹೇಳಿದರು.
ನಯನಾ ಮೋಟಮ್ಮ ಅವರ ಪ್ರಶ್ನೆಗೆ ಉತ್ತಿರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ; ಕಾಂಗ್ರೇಸ್ ಸರ್ಕಾರ ಬಂದಮೇಲೆ ಅತಿಥಿ ಶಿಕ್ಷಕರ ವೇತನವನ್ನು 12 ಸಾವಿರದಿಂದ 14 ಸಾವಿರಕ್ಕೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಬಳ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಶಾಸಕಿ ನಯನಾ ಮೋಟಮ್ಮ ಅವರು ಎತ್ತಿರುವ ವಿಚಾರದ ಬಹಳ ಗಂಭೀರವಾಗಿದ್ದು, ಅವರ ಬೇಡಿಕೆಯನ್ನು ಆದ್ಯತೆಯ ಮೇಲೆ ಪರಿಗಣಿಸಲಾಗುವುದು ಎಂದಿದ್ದಾರೆ.
ಇತ್ತ ತಮ್ಮ ಪರ ಸದನದಲ್ಲಿ ಧ್ವನಿ ಎತ್ತಿದ ಶಾಸಕಿ ನಯನಾ ಮೋಟಮ್ಮ ಅವರಿಗೆ ಅತಿಥಿ ಉಪನ್ಯಾಸಕರ ಸಂಘಟನೆಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.


