ಬಡವರು, ಶೋಷಿತರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರು ರಾಜ್ಯದ ಸಾಮಾಜಿಕ ದಿಕ್ಸೂಚಿಯನ್ನೇ ಬದಲಾಯಿಸಿದ ಮಹಾನ್ ನಾಯಕ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಅಭಿಪ್ರಾಯಪಟ್ಟರು.
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಹಾಗೂ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜಾತೀಯತೆ ಹಾಗೂ ವರ್ಗ ಸಂಘರ್ಷಗಳು ಹೆಚ್ಚಾಗಿದ್ದ ಕಾಲಘಟ್ಟದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದೇವರಾಜ ಅರಸು ಅವರು, ಪ್ರಧಾನಿ ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮವನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತಂದರು ಎಂದರು.
`ಉಳುವವನೇ ಭೂಮಿಯ ಒಡೆಯ’ ಎಂಬ ಕ್ರಾಂತಿಕಾರಿ ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಲಕ್ಷಾಂತರ ಬಡ ಕುಟುಂಬಗಳಿಗೆ ಜಮೀನಿನ ಹಕ್ಕು ದೊರೆಯುವಂತೆ ಮಾಡಿದರು. ಶಾಸಕಾಂಗ ಹಾಗೂ ಸ್ವಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾದರೂ, `ನನ್ನ ಪದವಿ ಹೋದರೂ ಚಿಂತೆಯಿಲ್ಲ, ಈ ಕಾನೂನು ಜಾರಿಗೆ ತಂದೇ ತರುತ್ತೇನೆ’ ಎಂದು ದಿಟ್ಟ ನಿರ್ಧಾರ ತಳೆದ ಧೀಮಂತ ನಾಯಕ ಅವರು ಎಂದು ಸ್ಮರಿಸಿದರು.
ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರು ನಾಮಕರಣ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ `ಎಲ್.ಜಿ.ಹಾವನೂರು ಆಯೋಗ’ ರಚಿಸಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ವೈಜ್ಞಾನಿಕ ಮೀಸಲಾತಿ ಜಾರಿಗೆ ತಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಂತರ ಸಾಮಾಜಿಕ ಸಮಾನತೆ ಮತ್ತು ಮೀಸಲಾತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಮತ್ತೊಬ್ಬ ನಾಯಕ ದೇವರಾಜ ಅರಸು ಎಂದು ಹೇಳಿದರು.
ಶ್ರೀನಿವಾಸ ಅಯ್ಯಂಗಾರ್ ಹಾಗೂ ಸಾಹುಕಾರ್ ಚೆನ್ನಯ್ಯ ಅವರ ಪೆÇ್ರೀತ್ಸಾಹದಿಂದ ರಾಜಕೀಯ ರಂಗ ಪ್ರವೇಶಿಸಿದ ಅರಸು ಅವರು, 1946ರಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾದರು. ಸ್ವಾತಂತ್ರ್ಯಾನಂತರ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಬಂದಾಗ, `ನನ್ನ ಬಳಿ ಹಣವಿಲ್ಲ, ಚುನಾವಣೆಗಾಗಿ ಹಣ ವ್ಯಯ ಮಾಡಲಾರೆ’ ಎಂದು ನೇರವಾಗಿ ಹೇಳಿದ್ದರು. ದೇಶದ ಮೊದಲ ಚುನಾವಣೆಯ ಸಮಯದಲ್ಲೇ ಹಣದ ಪ್ರಭಾವ ಆರಂಭವಾಗಿದ್ದರೂ, ಜನರ ಒತ್ತಾಯದ ಮೇರೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು ಎಂದು ಸ್ಮರಿಸಿದರು.
ಅಂಬೇಡ್ಕರ್ ಅವರ ಸಂವಿಧಾನದ ಪ್ರತಿಪಾದನೆಯಂತೆ ಪ್ರತಿಯೊಂದು ಸಣ್ಣ ಸಣ್ಣ ಜಾತಿ, ಸಮುದಾಯಗಳ ನಾಯಕರನ್ನು ಗುರುತಿಸಿ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಕೆಲಸವನ್ನು ಅರಸು ಅವರು ಮಾಡಿದರು. ದಲಿತ ಸಮುದಾಯದ ಮೇಲಿದ್ದ ಮಲ ಹೊರುವ ಪದ್ಧತಿ ನಿರ್ಮೂಲನೆ, ಜೀತ ಪದ್ಧತಿ ವಿಮುಕ್ತಿಯಂತಹ ಕ್ರಾಂತಿಕಾರಿ ಕಾಯ್ದೆಗಳನ್ನು ತಂದವರು ಅರಸು. ಸಾಹುಕಾರರ ಮನೆಗಳಲ್ಲಿ ವರ್ಷಪೂರ್ತಿ, ಜೀವಮಾನಪೂರ್ತಿ ಕೂಲಿ ಇಲ್ಲದೆ ಊಟಕ್ಕಾಗಿ ದುಡಿಯುತ್ತಿದ್ದ ಜೀತದಾಳುಗಳಿಗೆ ಮುಕ್ತಿ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬ ತುಡಿತ ಅವರಲ್ಲಿತ್ತು ಎಂದು ಸ್ಮರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎಸ್.ಕೀರ್ತನಾ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಜನತೆ ಮೊಬೈಲ್‍ನ ಅತಿಯಾದ ಬಳಕೆಯಿಂದ ಹೊರಬಂದು, ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ಮಹಾನ್ ನಾಯಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳು, ಶೋಷಿತರು ಹಾಗೂ ಬಡಜನರಿಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡಲು ದೇವರಾಜ ಅರಸು ಅವರು ಅಪಾರ ಕೊಡುಗೆ ನೀಡಿದ್ದಾರೆ. ಇಂದು ನೀವು ವಸತಿ ನಿಲಯಗಳಲ್ಲಿ ಇದ್ದು, ಉಚಿತ ಶಿಕ್ಷಣ ಪಡೆಯುತ್ತಿದ್ದರೆ ಅದಕ್ಕೆ ಅರಸು ಅವರ ಧೈರ್ಯ, ಸ್ಥೈರ್ಯ ಮತ್ತು ಕ್ರಾಂತಿಕಾರಿ ನಿರ್ಧಾರಗಳೇ ಕಾರಣ. ನವೋದಯದಂತಹ ಶಾಲೆಗಳು ಜಿಲ್ಲೆಗೆ ಒಂದಿದ್ದರೆ, ಅರಸು ಅವರು ಪ್ರತಿಯೊಬ್ಬ ಬಡ ಮಗುವಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಹಾಸ್ಟೆಲ್ ವ್ಯವಸ್ಥೆ ತಂದರು ಎಂದು ಸ್ಮರಿಸಿದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ.ಹೆಚ್.ಎಸ್.ಸತ್ಯನಾರಾಯಣ ಉಪನ್ಯಾಸ ನೀಡಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹಾಗೂ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ಧೀಮಂತ ನಾಯಕ, ಪರಿವರ್ತನೆಯ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಎಂದರು.
ಅರಸು ಅವರನ್ನು ಕೇವಲ ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ನೋಡಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಬಹುದೊಡ್ಡ ಸಾಮಾಜಿಕ ಪರಿವರ್ತನೆ ತರಲು ಎಂಟೆದೆಯ ಧೈರ್ಯ ಬೇಕಿತ್ತು. ಅಂತಹ ಬಲಿಷ್ಠ ನಾಯಕತ್ವ ಮತ್ತು ದಿಟ್ಟತನ ಹೊಂದಿದ್ದ ಬಂಟ ನಮ್ಮ ದೇವರಾಜ ಅರಸು. ಸರ್ಕಾರ ಹಾಗೂ ಸಾಮಾನ್ಯ ಜನರ ನಡುವಿದ್ದ ಅಂತರವನ್ನು ಕಡಿಮೆ ಮಾಡಿದ ಮೊದಲ ಮುಖ್ಯಮಂತ್ರಿ ಅವರು. ಅವರ ಕಾರ್ಯತತ್ಪರತೆ ಮತ್ತು ಕ್ರಿಯಾಶೀಲತೆಯನ್ನು ಕರ್ನಾಟಕದ ಇತಿಹಾಸ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮಕ್ಕೆ ಮುನ್ನ ತಾಲ್ಲೂಕು ತಹಸೀಲ್ದಾರ್ ಕಚೇರಿಯ ಆವರಣದಿಂದ ಕುವೆಂಪು ಕಲಾಮಂದಿರದವರೆಗೆ ದೇವರಾಜ ಅರಸು ಅವರ ಭಾವಚಿತ್ರದೊಂದಿಗೆ ನಡೆದ ಮೆರವಣಿಗೆಗೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಚಾಲನೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದಂಟರಮಕ್ಕಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿ ಸಾಕಮ್ಮ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಷ್ಮಾ ಶೆಟ್ಟಿ, ಅರಸು ಸಮಾಜದ ಜಿಲ್ಲಾಧ್ಯಕ್ಷ ಮುಕುಂದರಾಜ್ ಅರಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಸತೀಶ್, ನಗರಸಭಾ ಸದಸ್ಯ ಪರಮೇಶ್ವರರಾಜ್ ಅರಸ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ನಾಗೇಶ್‍ರಾಜ್ ಅರಸ್, ಮಂಜುನಾಥ್‍ರಾಜ್ ಅರಸ್, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ದಲಿತ ಸಂಘರ್ಷ ಸಮಿತಿ ಸಂಚಾಲಕ ಮರ್ಲೆ ಅಣ್ಣಯ್ಯ ಸೇರಿದಂತೆ ಮತ್ತಿತರರು ಇದ್ದರು.


