ಧರ್ಮಸ್ಥಾಪನೆಯೆ ಶ್ರೀಕೃಷ್ಣನ ಧ್ಯೇಯ. ಶಿಷ್ಟರ ರಕ್ಷಣೆ ಮತ್ತು ದುಷ್ಟರ ಶಿಕ್ಷೆ ಕೃಷ್ಣಾವತಾರದ ಪ್ರಮುಖ ಉದ್ದೇಶವಾಗಿತ್ತೆಂದು ಮಹಿಳಾಜಾಗೃತಿ ಸಂಘದಅಧ್ಯಕ್ಷೆ ಸುಲೋಚನಾಶೇಖರ್ ಹೇಳಿದರು.
ಮಹಿಳಾ ಜಾಗೃತಿ ಸಂಘ ಚಿಕ್ಕಮಗಳೂರು ಸವೂರ್ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಅವರು ನಿನ್ನೆ ಸಂಜೆ ಮಾತನಾಡಿದರು.
ಕೃಷ್ಣಾಷ್ಟಮಿ ಕೇವಲ ಕೃಷ್ಣನನ್ನು ನೆನಪಿಸಿಕೊಳ್ಳುವುದಲ್ಲ. ಅದೊಂದು ತತ್ತ್ವ. ಪ್ರೀತಿಯ ದಿವ್ಯನಿಧಿ. ಜ್ಞಾನ, ಕರ್ತವ್ಯ, ಸಮಚಿತ್ತತೆ, ಧರ್ಮ ಸಾಮರಸ್ಯ ಸದ್ಭಾವನೆಗಳ ನೆನಕೆ. ಸಾವಿರಾರುವರ್ಷಗಳಿಂದ ಭಾರತೀಯ ಜನಮಾನಸದಲ್ಲಿ ಅಚ್ಚೋತ್ತಿದ ವ್ಯಕ್ತಿತ್ವದು ಎಂದ ಸುಲೋಚನಾಶೇಖರ್, ವಿಷ್ಣುವಿನ ದಶಾವತರಗಳಲ್ಲಿ 8ನೆಯ ಅವತಾರ ಎಂದರು.
ಶ್ರೀಕೃಷ್ಣ ಜೀವನದಲ್ಲಿ ಬರುವ ಪ್ರತಿಯೊಂದು ಪ್ರಮುಖ ಘಟನೆಗಳು ಒಂದೊಂದು ಸಂಕೇತ ಹೊತ್ತಿದ್ದು ಜಗತ್ತಿಗೆ ಬೋಧಪ್ರದವಾಗಿದೆ. ಗೋಕುಲದ ಬಾಲ್ಯ. ಕಳಿಂಗಮರ್ದನ, ಗೋವರ್ಧನಧಾರಣೆ, ಮಧುರಾಪ್ರವೇಶ, ದ್ವಾರಕನಿರ್ಮಾಣ, ಮಹಾಭಾರತದ ರಾಜನೀತಿಗಳು, ಗೀತೋಪದೇಶ ಹೀಗೆ ಪ್ರತಿಯೊಂದು ಹಂತದಲ್ಲೂ ಮಾನವಜೀವನದ ಆಯಾಮಗಳನ್ನು ರೀತಿನೀತಿಗಳನ್ನು ಮನನಮಾಡಿಕೊಡುತ್ತಿರುವುದೇ ಕೃಷ್ಣನ ಪ್ರಮುಖ್ಯತೆ ಎಂದವರು ಬಣ್ಣಿಸಿದರು.
ಸುಧಾಮ, ವಿಧುರ, ಅಕ್ರೂರ ಇವರ ಭಕ್ತಿ, ಸ್ನೇಹ, ವಾತ್ಸಲ್ಯದಲ್ಲಿ ಕೃಷ್ಣನ ನಿಜಸ್ವರೂಪ ಅರಿಯುವ ಆತ್ಮೀಯ ಭಾವಿದೆ. ಕೃಷ್ಣನ ಬದುಕೆ ಪ್ರೀತಿಯ ಸಂದೇಶ. ದೈವಲೀಲೆಗಳ ಪ್ರಸಂಗಗಳು ಕೃಷ್ಣನನ್ನು ಆವರಿಸಿವೆ. ಮಾನವಸಂಬಂಧಗಳ ಸೂಕ್ಷ್ಮಭಾವನೆಗಳು ಕೃಷ್ಣನನ್ನು ಸುತ್ತುವರೆದಿವೆ ಎಂದ ಸುಲೋಚನಾ, ತುಂಟುತನ, ರಾಜಕೀಯನಂಟು, ನವನೀತಚೋರ ನಮ್ಮಲ್ಲಿ ಸದಾ ಹಸಿರಾಗಿರುತ್ತದೆ ಎಂದರು.
ನಂಬಿದವರನ್ನು ಸದಾ ಕಾಪಾಡುವ ಕೃಷ್ಣ, ಸುದರ್ಶನಚಕ್ರವನ್ನು ಪ್ರಯೋಗಿಸಿದ ಸಂದರ್ಭದಲ್ಲಿ ತೋರುಬೆರಳಿಗಾದ ಗಾಯವನ್ನು ಕಂಡು ಮರುಗಿದ ದ್ರೌಪದಿ ತನ್ನ ಸೆರಗನ್ನೆ ಹರಿದು ಬೆರಳಿಗೆ ಕಟ್ಟಿದ ಪ್ರಸಂಗವೇ ಬಹುಶ: ರಕ್ಷಾಬಂಧನದ ಮೂಲ ಸಂಕೇತ ಎಂದ ಸುಲೋಚನಾ ನರಕಾಸುರವಧೆ ದುಷ್ಟ ಶಿಕ್ಷೆಗೆ ದೊಡ್ಡ ನಿದರ್ಶನ ಎಂದರು.
ಶ್ರೀಕೃಷ್ಣ ಜನ್ಮವೇ ಒಂದು ರೋಚಕ. ದೇವಕಿ ಮತ್ತು ವಸುದೇವನ ಮಗನಾಗಿ ಸೆರÉಮನೆಯಲ್ಲಿ ಜನಿಸುತ್ತಾನೆ. ಕೃಷ್ಣಾವತರವೇ ಒಂದು ಸೊಜಿಗ. ಚೈತನ್ಯದಾಯಕ, ತತ್ವಬೋಧಕ. ಸಣ್ಣಮಕ್ಕಳಿಗೆ ಕೃಷ್ಣರಾಧೆಯರ ವೇಷ ಧರಿಸಿ ಸಂತೋಷಪಡುವ ಸಂದರ್ಭ ಇದೆಂದು ಸುಲೋಚನಾ ಬಣ್ಣಿಸಿದರು.
ಸಹಕಾರ್ಯದರ್ಶಿ ಗೀತಾಸುಂದ್ರೇಶ್ ನಿರೂಪಿಸಿದರು, ನಿರ್ದೇಶಕರುಗಳಾದ ಶೈಲಾಚಲುವಯ್ಯ ಸ್ವಾಗತಿಸಿ, ಪಾರ್ವತಿ ಬಸವರಾಜು ವಂದಿಸಿದರು. ಯಶೋಧಶಿವಪ್ಪ ಮತ್ತು ಗುಣವತಿನಂದೀಶ್ ಕೃಷ್ಣನ ಭಕ್ತಿಗೀತೆ ಹಾಡಿದರು. ಕಾರ್ಯದರ್ಶಿ ಕಾತ್ಯಾಯಿನಿಚಂದ್ರಶೇಖರ್, ಖಜಾಂಚಿ ಸುಲೋಚನಮ್ಮಶೆಟ್ಟಿ ಗೀತಾಮೂರ್ತಿ, ರೇಣುಕಾಪ್ರಸನ್ನ. ಸಿ.ಸುಲೋಚನಾ ಮತ್ತಿತರರು ಪೂಜೆಯಲ್ಲಿ ಪಾಲ್ಗೊಂಡು ಶ್ರೀಕೃಷ್ಣ ವಿಗ್ರಹಕ್ಕೆ ಪುಷ್ಪನಮನ ಸಲ್ಲಿಸಿದರು.
ಕೃಷ್ಣನ ಮತ್ತು ರಾಧೆಯ ವೇಷಭೂಷಣ ಸ್ಪರ್ಧೆಯಲ್ಲಿ ಟಿಎಂಎಸ್ ಶಾಲೆಯ 16 ಪುಟಾಣಿಮಕ್ಕಳು ಸ್ಪರ್ಧಿಸಿದ್ದು, ತೀರ್ಪುಗಾರರಾಗಿ ಪದ್ಮಾಜಯಪ್ರಕಾಶ್ ಭಾಗವಹಿಸಿದ್ದು, ಸ್ಪರ್ಧೆಯಲ್ಲಿ ಗೆದ್ದಮಕ್ಕಳಿಗೆ ಸಂಘದಅಧ್ಯಕ್ಷೆ ಸುಲೋಚನಾಶೇಖರ್ ನೆನಪಿನಕಾಣಿಕೆ ನೀಡಿದರು.
ಬಾಳೆ,ಮಾವಿನ ತಳಿರು ತೋರಣ, ರಂಗಿನರಂಗವಲ್ಲಿ, ನಾನಾ ವಿಧದ ಪುಷ್ಪಾಲಂಕಾರದಿಂದ ಸದಸ್ಯರೆಲ್ಲರೂ ಸಡಗರ-ಸಂಭ್ರಮದಿಂದ ಶ್ರೀಕೃಷ್ಣನನ್ನು ಪೂಜಿಸಿ, ಭಜನೆ ಭಕ್ತಿಗೀತೆ ಹಾಡುವುದರೊಂದಿಗೆ ಕೃಷ್ಣನಿಗೆ ಭಕ್ತಿ ಸಮರ್ಪಿಸಿದರು. ಕೃಷ್ಣನಿಗೆ ಇಷ್ಟವಾದ ಚಕ್ಕುಲಿ, ಉಂಡೆ, ಹಣ್ಣುಗಳನ್ನು ನೈವೇದ್ಯವಾಗಿ ಸಮರ್ಪಿಸಿ, ಕೊನೆಯಲ್ಲಿ ಎಲ್ಲರಿಗೂ ಪ್ರಸಾದವನ್ನು ಹಂಚಲಾಯಿತು.



