September 23, 2026
;
IMG-20260919-WA0188

 

 

ಕ್ರೀಡೆಗೆ ಪ್ರೋತ್ಸಾಹ ನೀಡುವುದಾಗಿ ಹೇಳುವ ಕ್ರೀಡಾ ಇಲಾಖೆ, ಮೂಡಿಗೆರೆಯ ಹೊಯ್ಸಳ ಕ್ರೀಡಾಂಗಣದ ಅಭಿವೃದ್ಧಿ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಜೀದ್ ಬಣಕಲ್ ಆರೋಪಿಸಿದ್ದಾರೆ.

ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು, ಕರ್ತವ್ಯ ನಿರ್ವಹಿಸುವ ಶಿಕ್ಷಕರು ಹಾಗೂ ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ಸಾರ್ವಜನಿಕರು ಮೂಲಸೌಕರ್ಯಗಳ ಕೊರತೆಯಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಸ್ಥಳ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ರಾಜಕೀಯ ನಾಯಕರ ಬೃಹತ್ ಸಮಾವೇಶಗಳ ಸಂದರ್ಭದಲ್ಲಿ ಮಾತ್ರ ಕ್ರೀಡಾಂಗಣದಲ್ಲಿ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಮೈದಾನ ಸಮತಟ್ಟು ಮಾಡಲು ಮಣ್ಣು ಸುರಿಯಲಾಗುತ್ತಿದ್ದು, ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಹಿಂದಿನ ಸ್ಥಿತಿಗೆ ಮರಳುತ್ತಿದೆ. ಇದರಿಂದ ಕ್ರೀಡಾಭ್ಯಾಸ ನಡೆಸುವವರಿಗೆ ತೊಂದರೆಯಾಗುತ್ತಿದೆ.

ಮೂಡಿಗೆರೆ ತಾಲೂಕಿನಲ್ಲಿ ಹಲವು ಪ್ರತಿಭಾವಂತ ಕ್ರೀಡಾಪಟುಗಳಿದ್ದರೂ, ಅಗತ್ಯ ಸೌಲಭ್ಯಗಳ ಕೊರತೆಯಿಂದ ಅವರ ಕ್ರೀಡಾ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಕ್ರೀಡಾಪಟುಗಳ ಆರೋಗ್ಯ, ಸುರಕ್ಷತೆ ಹಾಗೂ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಹೊಯ್ಸಳ ಕ್ರೀಡಾಂಗಣಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿಪಡಿಸಬೇಕು ಎಂದು ಸಾಜೀದ್ ಬಣಕಲ್ ಒತ್ತಾಯಿಸಿದ್ದಾರೆ.

 

 

Leave a Reply

Your email address will not be published. Required fields are marked *