ಮೂಡಿಗೆರೆ ಪಟ್ಟಣದಲ್ಲಿ ಸೆಪ್ಟಂಬರ್ 18ರಂದು ರಾತ್ರಿ ಇಬ್ಬರು ಯುವಕರ ನಡುವೆ ಉಂಟಾದ ಗಲಭೆಗೂ ಸಾರ್ವಜನಿಕ ಶ್ರೀ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿಗೂ ಯಾವುದೇ ಸಂಬಂಧಿವಿಲ್ಲವೆಂದು ಸಮಿತಿ ಅಧ್ಯಕ್ಷ ಪಿ.ಜಿ.ಅನುಕುಮಾರ್ ಸ್ಪಷ್ಟಪಡಿಸಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಮಿತಿಯಿಂದ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಪ್ರತಿ ವರ್ಷವೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಶಾಂತಿಯುತ ಹಾಗೂ ಅದ್ದೂರಿಯಾಗಿ ಗಣಪತಿ ಉತ್ಸವ ಆಚರಿಸಿಕೊಂಡು ಬರಲಾಗಿದೆ. ಸಮಿತಿ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ ವಿಸರ್ಜನೆ ಸೆ.26ರಂದು ನಡೆಯಲಿದೆ.
ಸೆ.18ರಂದು ರಾತ್ರಿ ಇಬ್ಬರು ಯುವಕರು ತಮ್ಮ ವಯಕ್ತಿಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದು, ಸಮಿತಿ ಆಚರಿಸುತ್ತಿರುವ ಗಣಪತಿ ಉತ್ಸವದ ಸ್ಥಳದಿಂದ ಸುಮಾರು 1 ಕಿ,ಮೀ ದೂರದಲ್ಲಿ ಘಟನೆ ನಡೆದಿದೆ. ಆದರೆ ಕೆಲ ಮಾಧ್ಯಮಗಳಲ್ಲಿ ಯುವಕರ ನಡುವಿನ ಗಲಾಟೆಯನ್ನು ಗಣಪತಿ ಉತ್ಸವಕ್ಕೆ ಹಾಗೂ ವಿಸರ್ಜನೆಗೆ ಜೋಡಿಸಿ ಸುಳ್ಳು ವರದಿ ಮಾಡಲಾಗಿದೆ. ಇದು ವಾತ್ಸವಕ್ಕೆ ವಿರುದ್ಧವಾಗಿದ್ದು, ಸಾರ್ವಜನಿಕರು ಇಂತಹ ವರದಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿದರು.
ಪ್ರತಿ ವರ್ಷ ಗಣಪತಿ ಉತ್ಸವ ಮಾಡುವಾಗ, ಲೋಕ ಕಲ್ಯಾಣಕ್ಕಾಗಿ ಹೋಮ ಹವನಗಳು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆಧ್ಯತೆ ನೀಡಲು ಕ್ರೀಡೆ, ರಕ್ತದಾನ ಶಿಬಿರ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಸಿಕೊಂಡು ಬಂದಿದ್ದೇವೆ. ಮಲೆನಾಡು ಭಾಗದಲ್ಲಿ ಪ್ರಥಮ ಬಾರಿಗೆ ಮಲ್ಲಗಂಬ ತರಬೇತಿ ಪ್ರಾರಂಭಿಸಿದ್ದು, ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಲ್ಲಗಂಬ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಇಂತಹ ಕಾರ್ಯದಿಂದ ಗಣಪತಿ ಉತ್ಸವಕ್ಕೆ ತಾಲೂಕಿನಾಧ್ಯಂತ ಉತ್ತಮ ಬೆಂಬಲ ಪ್ರೋತ್ಸಾಹ ಸಿಗುತ್ತಿದೆ. ಇದನ್ನು ಸಹಿಸಿಕೊಳ್ಳದ ಕೆಲ ಕಾಣದ ಕೈಗಳು ಸಮಿತಿಗೆ ಕಪ್ಪು ಚುಕ್ಕಿ ತರುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿರುವ ಸಂಶಯ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ವಹಿಸಲು ಸಮಿತಿಯಿಂದ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿ ಕಾರ್ಯಾಧ್ಯಕ್ಷ ಜೆ.ಎಸ್.ರಘು, ಉಪಾಧ್ಯಕ್ಷ ರಘು, ಪದಾಧಿಕಾರಿಗಳಾದ ವಿನಯ್ ಹಳೆಕೋಟೆ, ಪಟೇಲ್ ಮಂಜು, ಪ್ರವೀಣ್, ಸಂತೋಷ್ ಮೇಕನಗದ್ದೆ, ಆಶಿಕ್ ಮಗ್ಗಲಮಕ್ಕಿ ಮುಂತಾದವರು ಉಪಸ್ಥಿತರಿದ್ದರು.


