ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳನ್ನು ಗ್ರಾಮ ಮತ್ತು ಸಮೀಕ್ಷೆ ಸಂಖ್ಯೆ ಮಟ್ಟದಲ್ಲಿ ರಾಜ್ಯ ಸರ್ಕಾರ ಭೌತಿಕವಾಗಿ ಪರಿಶೀಲನೆ ನಡೆಸುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ಈ ನ್ಯೂನತೆಗಳನ್ನು ನಿವಾರಿಸಲು ಭೌತಿಕವಾಗಿ ಗ್ರಾಮವಾರು ಮತ್ತು ಸರ್ವೇ ಸಂಖ್ಯೆವಾರು ಸಮೀಕ್ಷೆ ನಡೆಸಿ, ಪ್ರತಿಯೊಂದು ಗ್ರಾಮದ ಮನೆ, ಶಾಲೆ, ತೋಟಗಾರಿಕೆ, ಕುಡಿಯುವ ನೀರು ಮತ್ತು ವಿದ್ಯುತ್ ಕಂಬಗಳ ನಕ್ಷೆ ತಯಾರಿಸಿ ರಕ್ಷಣೆ ಮಾಡಬೇಕಿದೆ. ಕಾಡಿನೊಳಗೆ ಬಫರ್ ಜೋನ್ ನಲ್ಲಿರುವವರಿಗೆ ಮನೆ ನೀಡಲು ಸೂಕ್ತ ಮಾರ್ಗಸೂಚಿ ರೂಪಿಸಬೇಕಿದೆ. ಈ ಸಮೀಕ್ಷೆ ನಡೆಸಿ ನಕ್ಷೆ ಸಿದ್ಧಪಡಿಸಲು ಮತ್ತು ಮಾರ್ಪಾಡುಗಳನ್ನು ಸೂಚಿಸಲು ಒಂದು ವರ್ಷದ ಕಾಲಾವಕಾಶ ನೀಡುವಂತೆ ಹಾಗೂ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸದೇ ವಿವರವಾದ ಚರ್ಚೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದು ತಿಳಿಸಿದರು.
ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ರೈತರು ಮತ್ತು ನಿವಾಸಿಗಳನ್ನು ಸ್ಥಳಾಂತರ ಮತ್ತು ಕಿರುಕುಳದಿಂದ ರಕ್ಷಿಸುವುದರ ಜೊತೆಗೆ ಅರಣ್ಯ ಮತ್ತು ಪರಿಸರವನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಈ ಸಮಿತಿಯ ಮೂಲಕ ಭೌತಿಕ ಸಮೀಕ್ಷೆ ನಡೆಸಿ ಪರಿಸರ ಸೂಕ್ಷ್ಮ ಪ್ರದೇಶ, ಅರಣ್ಯ, ಕೃಷಿ, ತೋಟಗಾರಿಕೆ ಹಾಗೂ ಜನವಸತಿ ಪ್ರದೇಶಗಳನ್ನು ವೈಜ್ಞಾನಿಕವಾಗಿ ಪ್ರತ್ಯೇಕಿಸುವ ಕುರಿತು ಶಿಫಾರಸು ಮಾಡಲಿದೆ. ಇದರೊಂದಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಮಿತಿಗಳನ್ನು ರಚಿಸಲು ನಿರ್ಣಯಿಸಲಾಗಿದೆ ಎಂದರು. ಕಸ್ತೂರಿ ರಂಗನ್ ವರದಿ ಕುರಿತ ಕೇಂದ್ರ ಸರ್ಕಾರದ ಏಳನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ಯಥಾಸ್ಥಿತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜುಲೈ 27, 2026ರಂದು ಕೇಂದ್ರ ಸರ್ಕಾರ ಹೊರಡಿಸಿದ ಏಳನೇ ಕರಡು ESA ಅಧಿಸೂಚನೆಯಲ್ಲಿ ಕರ್ನಾಟಕದ 10 ಜಿಲ್ಲೆಗಳ 1,449 ಗ್ರಾಮಗಳ ಒಟ್ಟು 20,668 ಚದರ ಕಿ.ಮೀ. ಪ್ರದೇಶವನ್ನು ಗುರುತಿಸಲಾಗಿದೆ. ಕೇಂದ್ರ ಸರ್ಕಾರದ ಈ ಕರಡು ಅಧಿಸೂಚನೆಯು ಉಪಗ್ರಹ ಆಧಾರಿತ ಅವೈಜ್ಞಾನಿಕ ಸಮೀಕ್ಷೆಯಾಗಿದ್ದು, ಜಂಟಿ ಭೌತಿಕ ಸಮೀಕ್ಷೆ ಅಥವಾ ಸರ್ವೇ ನಂಬರ್ ಆಧಾರಿತವಾಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಉಪಗ್ರಹ ಚಿತ್ರಗಳಲ್ಲಿ ಅರಣ್ಯ ಮತ್ತು ಕೃಷಿ-ತೋಟಗಾರಿಕೆ ಪ್ರದೇಶಗಳು ಒಂದೇ ರೀತಿ ಹಸಿರಾಗಿ ಕಾಣುವುದರಿಂದ ಈ ಗೊಂದಲ ಸೃಷ್ಟಿಯಾಗಿದೆ. ಒಂದು ಗ್ರಾಮದ ಐದನೇ ಒಂದು ಭಾಗ (20ರಷ್ಟು) ಅರಣ್ಯ ಪ್ರದೇಶದಲ್ಲಿದೆ ಎಂಬ ಕಾರಣಕ್ಕೆ ಇಡೀ ಗ್ರಾಮವನ್ನೇ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವುದು ವೈಜ್ಞಾನಿಕ ಕ್ರಮವಲ್ಲ. ಇದರಿಂದ ಮನೆ ನಿರ್ಮಾಣ, ಆಸ್ತಿ ವಾರಸುದಾರಿಕೆ, ಕೃಷಿ, ಪ್ಲಾಂಟೇಶನ್, ರಸ್ತೆ, ಶಾಲೆ, ಆಸ್ಪತ್ರೆ ಮತ್ತು ಕುಡಿಯುವ ನೀರಿನ ಪೈಪ್ಲೈನ್ನಂತಹ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೌಲಭ್ಯಗಳಿಗೆ ಅನಗತ್ಯ ತೊಂದರೆ ಉಂಟಾಗಿ ಸ್ಥಳೀಯರಲ್ಲಿ ಆತಂಕ ಮೂಡಿದೆ ಎಂದು ವಿವರಿಸಿದರು.
ಅಲ್ಲದೆ, ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡುಯ್ಯಲು, ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಲು ಮತ್ತು ಕೇಂದ್ರಕ್ಕೆ ಸಲ್ಲಿಸಿ ಸುಪ್ರೀಂ ಕೋರ್ಟಿನ ಹಿರಿಯ ವಕೀಲರನ್ನು ನೇಮಿಸಲು ಸಲಹೆಗಳು ವ್ಯಕ್ತವಾಗಿ ಸಹಮತ ಮೂಡಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ರಾಜ್ಯದ ನಿಲುವನ್ನು ಸಮರ್ಥವಾಗಿ ಮಂಡಿಸಲು ಕರ್ನಾಟಕದ ಎಲ್ಲ ಸಂಸದರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ಮತದಾರರೇ ನಮ್ಮ ಪ್ರಭುಗಳು, ರಾಜಕೀಯ ಮಾಡುವ ಸಮಯದಲ್ಲಿ ರಾಜಕೀಯ ಮಾಡೋಣ. ಈಗ ರೈತರು ಬದುಕಬೇಕು, ಜನಸಾಮಾನ್ಯರು ಬದುಕಬೇಕು” ಎಂದು ಕರೆ ನೀಡಿದರು.


