September 25, 2026
;
NEWS 1

 

 

ಕೃಷಿ ಪತ್ತಿನ ಸಹಕಾರ ಸಂಘಗಳು ಕೇವಲ ಲಾಭಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳಲ್ಲ, ಬದಲಿಗೆ ಅವು ಗ್ರಾಮೀಣ ಭಾಗದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಬೆನ್ನೆಲುಬಾಗಿವೆ ಎಂದು ವಿಧಾನ ಪರಿಷತ್ ಶಾಸಕ ಡಾ. ರವಿ.ಸಿಟಿ ತಿಳಿಸಿದರು.

ಮೂಗ್ತಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ 78 ಕೋಟಿ ವಾರ್ಷಿಕ ವಹಿವಾಟು ನೆಡೆಸುತ್ತಿರುವ ಈ ಸಂಘವು 12 ವರ್ಷಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸುವುದರ ಜೊತೆಗೆ 11 ಕೋಟಿ 14 ಲಕ್ಷ ಸಾಲ ನೀಡುವುದರ ಜೊತೆಗೆ 800 ಸದಸ್ಯರನ್ನು ಹೊಂದಿದೆ ಹಾಗೂ 15 ಲಕ್ಷ ವಾರ್ಷಿಕ ಲಾಭದೊಂದಿಗೆ ಎಲ್ಲರ ವಿಶ್ವಾಸವನ್ನು ಗಳಿಸಿದೆ ಎಂದರು.

ಜಿಲ್ಲೆಯಲ್ಲಿ ಎದುರಾಗಿರುವ ಬರಗಾಲದಿಂದಾಗಿ ರೈತರು ಬೆಳೆನಷ್ಟ ಉಂಟಾಗಿ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ, ಸಾಲ ತೀರಿಸದೆ ಮರುಸಾಲ ಸಿಗುವುದಿಲ್ಲ ಇದರಿಂದಾಗಿ ಸಹಕಾರಿ ಸಂಘಗಳು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಉಂಟಾಗಿದ್ದು, ಇದಕ್ಕಾಗಿ ಹಿತಿಮಿತಿ ಬಳಕೆ ಹಾಗೂ ಕಡಿಮೆ ನೀರಿನಲ್ಲಿ ಬೆಳೆಗಳನ್ನು ಬೆಳೆಯುವ ಮೂಲಕ ಆಪತ್ಕಾಲ ಮಾರ್ಗವನ್ನು ಅನುಸರಿಸುವ ಮೂಲಕ ಆತ್ಮಸ್ಥೈರ್ಯದಿಂದ ಸಂಕಷ್ಟದಿಂದ ಪಾರಾಗುವಂತೆ ಹೇಳಿದರು.

ನಬಾರ್ಡ್ ಆದೇಶದಂತೆ 60% ಕೃಷಿ ಸಾಲ, 40% ಕೃಷಿಯೇತರ ಸಾಲ ನೀಡಲಾಗುತ್ತಿದೆ ಎಂದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.

ಮೂಗ್ತಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ್ ಮಾತನಾಡಿ 3 ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದ್ದು, 2017 ರಲ್ಲಿ ಕಟ್ಟಡ ನಿರ್ಮಾಣ ಪ್ರಾರಂಭಿಸಿ ಹಂತ-ಹಂತವಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ನಬಾರ್ಡ್ ಮೂಲಕ 65 ಲಕ್ಷ ರೂ ಸಾಲವನ್ನು ಪಡೆದು 18 ಲಕ್ಷ ರೂ ಕಂತನ್ನು ಕಟ್ಟಲಾಗಿದೆ ಎಂದರು.

ಉತ್ತಮ ಕಟ್ಟಡ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಕಟ್ಟಡಕ್ಕೆ ಬೇಕಾದ ಮರಳು, ಇಟ್ಟಿಗೆ ಸೇರಿದಂತೆ ಅಗತ್ಯ ವಸ್ತುಗಳನ್ನು ಆಡಳಿತ ಮಂಡಳಿ ಸದಸ್ಯರು ಖುದ್ದಾಗಿ ಬೇಟಿನೀಡಿ ಪರಿಶೀಲಿಸಿ ಗುಣಮಟ್ಟದ ಸಾಮಗ್ರಿಗಳನ್ನು ತರಲಾಗುತ್ತಿತ್ತು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ದಿವಾಕರ್, ಲೋಕಪ್ಪಗೌಡ, ಮಂಜುನಾಥ್, ಪ್ರವೀಣ್, ಕೆ.ಕೆ ಕಿರಣ್‍ಕುಮಾರ್, ಶಶಿರೇಖಾ, ಶಹದಾಬ್, ಎಂ.ಎಸ್ ದಯಾನಂದ್, ಚಂದ್ರೇಗೌಡ, ನಿರ್ದೇಶಕರುಗಳಾದ ಕುಮಾರೇಗೌಡ, ಪ್ರಭಾಕರ್, ಗುರುಮೂರ್ತಿ, ಮನುಕುಮಾರ್, ಪ್ರಮೀಳ, ಸೀತಾ.ಹೆಚ್.ಕೆ, ದೇವರಾಜ್, ಪದ್ಮ, ಪವನ್‍ಕುಮಾರ್, ಹರೀಶ್‍ರಾಜ್, ಸೋಮಶೇಖರಪ್ಪ, ರಮೇಶ್ ಗೌಡ, ಲಕ್ಷ್ಮಣ್‍ಗೌಡ ಉಪಸ್ಥಿತರಿದ್ದರು. ಸಿಇಓ ರಾಜೇಶ್ ಸ್ವಾಗತಿಸಿ ವಂದಿಸಿದರು.

 

 

Leave a Reply

Your email address will not be published. Required fields are marked *