September 30, 2026
;
001

 

 

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮುಸ್ಲಿಮರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಯೋಜನಾ ಬದ್ಧವಾಗಿ ಅಕ್ರಮ ಆಕ್ಷೇಪಗಳನ್ನು ಅರ್ಜಿ ನಮೂನೆ 7ರಲ್ಲಿ ಸಲ್ಲಿಸುತ್ತಿದ್ದಾರೆ. ಮುಸ್ಲಿಂ ಮತದಾರರು ಗ್ರಾಮಗಳಲ್ಲಿ ಈಗಲೂ ವಾಸಿಸುತ್ತಿದ್ದಾರೆ. ಅವರು ಗ್ರಾಮದಲ್ಲಿ ಇಲ್ಲ ಎಂದು ತಪ್ಪು ಮಾಹಿತಿ ನೀಡಿ ಸುಳ್ಳು ಅರ್ಜಿ ಸಲ್ಲಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಪಕ್ಷದ ಮುಖಂಡರು ಮತ್ತು ಮುಸ್ಲಿಂ ಮುಖಂಡರು ಸೋಮವಾರ ಮೂಡಿಗೆರೆ  ತಹಸೀಲ್ದಾರ್ ಅವರನ್ನು ಒತ್ತಾಯಿಸಲು ತಾಲೂಕು ಕಚೇರಿಗೆ ತೆರಳಿದಾಗ ತಹಸಿಲ್ದಾರ್ ಎಸ್.ಅಶ್ವಿನಿ ಅವರು ಸಭೆ ನಡೆಸಿ ಸುಳ್ಳು ಅರ್ಜಿ ಸಲ್ಲಿಸಿದವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮೂಡಿಗೆರೆ ಪಟ್ಟಣದ 3 ಮತಗಟ್ಟೆಯಲ್ಲಿ 83, ಬಣಕಲ್ ಕೂಡಹಳ್ಳಿ ಮತಗಟ್ಟೆಯ 52, ಬಿಳಗುಳ 4 ಮತಗಟ್ಟೆ 30, ಬಗ್ಗಸಗೋಡು ಮತಗಟ್ಟೆ 28, ಬಿದರಹಳ್ಳಿ 8, ಹೊರಟ್ಟಿ 7, ಹ್ಯಾಂಡ್ ಪೋಸ್ಟ್ 12 ಸೇರಿದಂತೆ ತಾಲೂಕಿನ ವಿವಿಧ ಮತಗಟ್ಟೆಗಳಲ್ಲಿ 600ಕ್ಕೂ ಹೆಚ್ಚು ಮುಸ್ಲಿಮರ ಮತಗಳನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಕೆಲವರು ನಮೂನೆ 7 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಲ್ಲಿಕೆಯಾಗಿರುವ 600ಕ್ಕೂ ಹೆಚ್ಚು ಸುಳ್ಳು ಮಾಹಿತಿ ನೀಡಿರುವ ಅರ್ಜಿಗಳು ಮುಸ್ಲಿಮರ ವಿರುದ್ಧ ಸಲ್ಲಿಕೆಯಾಗಿವೆ. ಗೋಣಿಬೀಡು ಮತ್ತು ಬಾಳೂರು ಹೋಬಳಿಗಳಲ್ಲಿ ಕೂಡ ಇಂತಹ ಸುಳ್ಳು ಅರ್ಜಿ ಸಲ್ಲಿಕೆಯಾಗಿದೆ. ಗೋಣಿಬೀಡು ಮತ್ತು ಬಾಳೂರು ಹೋಬಳಿಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ.

ಈ ಎಲ್ಲಾ ಅರ್ಜಿಗಳಲ್ಲಿ ನಮೂದಿಸಿರುವ ಮುಸ್ಲಿಂ ಮತದಾರರು ಆಯಾ ಗ್ರಾಮಗಳಲ್ಲಿ ಈಗಲೂ ವಾಸವಾಗಿದ್ದಾರೆ. ಸುಳ್ಳು ಅರ್ಜಿ ಸಲ್ಲಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಲ್ಲಿಕೆಯಾಗಿರುವ ನಕಲಿ ಅರ್ಜಿಯ ಸಾಧಕ ಬಾಧಕಗಳನ್ನು ಪರಿಶೀಲಿಸದೆ ಮತಪಟ್ಟಿಯಿಂದ ಹೆಸರು ಕೈ ಬಿಡಬಾರದು. ಬಿಎಲ್‍ಓಗಳು ಮತ್ತೊಮ್ಮೆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮತದಾರರ ಪಟ್ಟಿಯಿಂದ ಮುಸ್ಲಿಮರ ಹೆಸರನ್ನು ಕೈಬಿಟ್ಟರೆ ಹಾಗೂ ಸುಳ್ಳು ಅರ್ಜಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತಾಲೂಕು ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಸಭೆಯಲ್ಲಿದ್ದ ಮುಖಂಡರು ಎಚ್ಚರಿಸಿದರು.

ಮೂಡಿಗೆರೆ ತಾಲೂಕಿನಲ್ಲಿ ಅರ್ಜಿ ನಮೂನೆ 7 ರಲ್ಲಿ 600ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ಮತದಾರರ ನೊಂದಾವಣಾಧಿಕಾರಿ ಬಿ.ಸಿ.ಕಲ್ಮುರುಡಪ್ಪ ಅವರು ನಮೂನೆ 7 ರಲ್ಲಿ ಸುಳ್ಳು ಅರ್ಜಿ ನೀಡಿದವರ ಪರವಾಗಿದ್ದಾರೆ. 176 ಅರ್ಜಿ ಮಾತ್ರ ಸಲ್ಲಿಕೆಯಾಗಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮತದಾರರ ನೊಂದಾವಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಸ್ಲಿಮರು ಗ್ರಾಮದಲ್ಲಿ ವಾಸವಿದ್ದರೂ ಕೂಡ ಅವರ ಮತವನ್ನು ಪಟ್ಟಿಯಿಂದ ಅಳಿಸಿ ಹಾಕಲು ಅರ್ಜಿ ನೀಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಾಪುನಗರದ ನಿವಾಸಿ ಆಸಿಫ್ ಒತ್ತಾಯಿಸಿದರು.

ತಹಸೀಲ್ದಾರ್ ಎಸ್.ಅಶ್ವಿನಿ ಮಾತನಾಡಿ, ನಮೂನೆ 7 ರಲ್ಲಿ 176 ಅರ್ಜಿಗಳು ಬಂದಿದೆ. ಅದನ್ನು ಪರಿಶೀಲಿಸಲಾಗುವುದು. ಸುಳ್ಳು ಅರ್ಜಿ ಸಲ್ಲಿಕೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು. ಈ ತಿಂಗಳ 23ರವರೆಗೆ ಮಾತ್ರ ನಮೂನೆ 7 ರಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಕರಡು ಪಟ್ಟಿಯಲ್ಲಿ ಬಂದಿರುವ ಹೆಸರನ್ನು ಕೈ ಬಿಟ್ಟಿಲ್ಲ. ನಮೂನೆ 7 ರಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಅದು ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಸೇರುತ್ತದೆ. ಅಲ್ಲಿಂದ ಅವರು  ಇಲ್ಲಿಗೆ ಕಳಿಸಿದ ಬಳಿಕ ಪರಿಶೀಲನೆ ನಡೆಸಲಾಗುವುದು. ನಮೂನೆ 7 ರಲ್ಲಿ ಅರ್ಜಿ ಸಲ್ಲಿಸಿದವರು ಅದೆ ಮತಗಟ್ಟೆಯ ಮತದಾರರಾಗಿರಬೇಕು. ಅವರ ಎಪಿಕ್ ನಂಬರ್ ಮತ್ತು ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು. ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಅರ್ಜಿದಾರರ ಪೂರ್ಣ ಮಾಹಿತಿ ಇದೆಯೇ ಎಂಬುದನ್ನು ಕೂಲಂಕುಶವಾಗಿ ಪರಿಶೀಲಿಸಲಾಗುತ್ತಿದೆ. ಯಾರೋ ಅರ್ಜಿ ಕೊಟ್ಟ ತಕ್ಷಣ ಪಟ್ಟಿಯಿಂದ ಡಿಲೀಟ್ ಮಾಡುವುದಿಲ್ಲ. ಬಿಎಲ್‍ಓಗಳು ಜಾಗೃತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತದಾರರ ನೊಂದಾವಣಾಧಿಕಾರಿ ಬಿ.ಸಿ.ಕಲ್ಮುರುಡಪ್ಪ ಅವರು ಕರ್ತವ್ಯಲೋಪವೆಸಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮತದಾರರ ನೊಂದಾವಣಾಧಿಕಾರಿ ಬಿ.ಸಿ.ಕಲ್ಮುರುಡಪ್ಪ, ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕುನ್ನಳ್ಳಿ ರವಿ, ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕಿರ್ ಹುಸೇನ್, ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುರೇಶ್ ಜೈನ್, ಹೋಬಳಿ ಅಧ್ಯಕ್ಷ ರಘು, ಎದ್ದೇಳು ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಗೌಸ್ ಮೊಹಿಯುದ್ದೀನ್. ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಬಿ.ಎಚ್.ಮಹಮ್ಮದ್, ಕಡೂರು ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಚಂದ್ರಶೇಖರ್ ನಾಯಕ್, ಎಸ್‍ಡಿಪಿಐ ಮುಖಂಡರಾದ ಕೆ.ಪಿ.ಖಾಲಿದ್, ಪಿ.ಕೆ.ಹನೀಫ್, ಮುಖಂಡರಾದ ಎ.ಸಿ. ಅಯೂಬ್ ಹಾಜಿ, ಇರ್ಫಾನ್ ಬಣಕಲ್, ಸಂಪತ್ ಕುಮಾರ್, ಪಿ.ಕೆ.ಹಮೀದ್, ಚಂದ್ರು ಒಡೆಯರ್, ಅಲ್ತಾಫ್ ಬಿಳಗುಳ, ಮಹಮ್ಮದ್ ಜುಬೇರ್, ಯಾಕೂಬ್ ಗೋಣಿಗದ್ದೆ, ಫಾರೂಕ್ ಬಣಕಲ್, ಸಿ.ಎಚ್.ಅಹಮದ್ ಬಾವ ಇತರರಿದ್ದರು.

 

 

Leave a Reply

Your email address will not be published. Required fields are marked *