ಮಲೆನಾಡಿನಲ್ಲಿ ಕೆಲವು ವರ್ಷಗಳಿಂದ ಕಾಡಾನೆಗಳು ಕಾಣಿಸಿಕೊಂಡು ಬೆಳೆ ಹಾನಿಯೊಂದಿಗೆ ಜೀವ ಹಾನಿಯನ್ನು ಮಾಡುತ್ತಿರುವುದು ನಿರಂತರವಾಗಿದ್ದು,ಪ್ರಸ್ತುತ ಆಲ್ದೂರು ಸಮೀಪದ ಬಸರವಳ್ಳಿ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ತಲೆನೋವಾಗಿ ಪರಿಣಮಿಸಿದೆ.
ಈಚೆಗೆ ಸಲಗ ಒಂದು ಹೆದ್ದಾರಿ ರಸ್ತೆಯಲ್ಲಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಸಮೀಪದ ಬಸವನಕೋಟೆ ಕಾಡಿನಿಂದ ಎರಡು ಸಲಗಳು ರಾತ್ರಿ 8:30ರ ಬಳಿಕ ತೋಟಗಳಿಗೆ ನುಗ್ಗುತ್ತಿವೆ. ಭಾನುವಾರ ರಾತ್ರಿ ಕೆಎನ್ ಸತೀಶ್ ಕೆಎನ್ ರಮೇಶ್ ಎಂಬ ಸ್ಥಳೀಯರ ಕಾಫಿ ತೋಟಕೆ ಲಗ್ಗೆ ಇಟ್ಟ ಎರಡು ಕಾಡಾನೆಗಳು ಅಡಿಕೆ ಕಾಫಿ ಇನ್ನಿತರ ಗಿಡಗಳನ್ನು ಮುರಿದು ಹಾಕಿವೆ.
ಬಿಜೆಪಿ ಮಂಡಲ ಅಧ್ಯಕ್ಷರಾದ ರವಿ ಬಸರವಳ್ಳಿ ಮಾತನಾಡಿ ಕಾಡಾನೆಗಳನ್ನು ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಡ್ರೋನ್ ಮೂಲಕ ಬೆನ್ನಟ್ಟಿ ಕಾಡಿಗೆ ಓಡಿಸುತ್ತಾರೆ ಪುನಹ ಆನೆಗಳು ಹಿಂತಿರುಗಿ ನಿರಂತರವಾಗಿ ಬರುತ್ತಲೇ ಇವೆ. ಆನೆಗಳ ಕಾಟವನ್ನು ತಪ್ಪಿಸಲು ಶಾಶ್ವತ ಪರಿಹಾರವನ್ನು ಅರಣ್ಯ ಇಲಾಖೆ ಮತ್ತು ಸರ್ಕಾರ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಆವತಿ ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತದೆ ಇದ್ದು, ಈಗಾಗಲೇ ಆಲ್ದೂರು ಆವತಿ ಇನ್ನಿತರ ಹೋಬಳಿಗಳಲ್ಲಿ ಕಾಡಾನೆಗಳ ಉಪಟಳ ಅಧಿಕವಾಗುತ್ತಿದೆ.
ಗಿಡಗಳು ಮುರಿದರೆ ಹೊಸ ಸಸಿ ನೆಡಬಹುದು ಬೆಳೆ ಹಾನಿಯಾದರೆ ಸರ್ಕಾರದಿಂದ ಅಲ್ಪಸಲ್ಪ ನಷ್ಟ ಪರಿಹಾರ ಪಡೆಯಬಹುದು ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮತ್ತು ಕಾಫಿ ಬೆಳೆಗಾರರಿಗೆ ಜೀವಕ್ಕೆ ಹಾನಿಯಾದರೆ ಏನು ಮಾಡುವುದು ಎಂಬ ಪ್ರಶ್ನೆ ಕಾಡುತ್ತಲ್ಲಿದ್ದು ಈಗಾಗಲೇ ಸಾಕಷ್ಟು ಕಾಡಾನೆಗಳ ದಾಳಿಯಿಂದ ಬಳಲಿರುವ ಕಾಫಿ ಬೆಳೆಗಾರರು ಮುಂಬರುವ ದಿನಗಳಲ್ಲಿ ಕಾಫಿ ಕೃಷಿಯನ್ನು ಹೇಗೆ ಮಾಡುವುದು ಎಂಬ ಆತಂಕದ ಛಾಯೆ ಮೂಡಿದೆ ಎಂದರು.


