October 12, 2026
;
suddi-8

 

 

ಚಿಕ್ಕಮಗಳೂರು ತಾಲ್ಲೂಕು, ಆಲ್ದೂರು ಹೋಬಳಿ ಸತ್ತಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 4.63 ಕೋಟಿ ಅಕ್ರಮ ನಡೆದಿದ್ದು, ಮಾಜಿ ಸಿಇಒ ಮತ್ತು ಹಾಲಿ ಸಿಇಒ ಅವರುಗಳನ್ನು ತನಿಖೆಗೆ ಒಳಪಡಿಸಬೇಕೆಂದು ಸಂಘದ ಮಾಜಿ ನಿರ್ದೇಶಕ ಅಶೋಕ್ ಸೂರಪ್ಪನಹಳ್ಳಿ ಆಗ್ರಹಿಸಿದರು.

ಅವರು  ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2018-19 ನೇ ಸಾಲಿನಲ್ಲಿ ಸಂಘದ ಬ್ಯಾಂಕ್ ಖಾತೆಯಲ್ಲಿ ರೂ. 4.63 ಕೋಟಿ ನಗದು ಠೇವಣಿ ಆಗಿರುವುದು ಆದಾಯ ತೆರಿಗೆ ಇಲಾಖೆಯ ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಣಕ್ಕೆ ಸಂಘವು ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಿಲ್ಲ ಹಾಗೂ ಆದಾಯ ತೆರಿಗೆ ಇಲಾಖೆ ನೋಟೀಸ್ ಕೊಟ್ಟರೂ ಯಾವುದೇ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಹಣವನ್ನು ವಿವರಿಸಲಾಗದ ಕಪ್ಪು ಹಣ ಎಂದು ಪರಿಗಣಿಸಿ, ಸಂಘದ ಮೇಲೆ 7.29 ಕೋಟಿ ತೆರಿಗೆ ಮತ್ತು ದಂಡ ವಿಧಿಸಿದೆ. ಬೆಂಗಳೂರಿನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ ಎಂಬ ಮೇಲ್ಮನವಿ ನಡೆದಿದೆ. ಜು.23 ರಂದು ನ್ಯಾಯಾಧೀಕರಣವು ಹಳೆಯ ಆದೇಶವನ್ನು ರದ್ದುಪಡಿಸಿ, ಮತ್ತೆ ಹೊಸ ವಿಚಾರಣೆಗೆ ಆದೇಶಿಸಿದೆ ಎಂದರು.

ನ್ಯಾಯಾಧೀಕರಣದ ಮುಂದೆ ಸಂಘದ ಪರ ವಕೀಲರು ಈ 4.63 ಕೋಟಿ ಸಂಘದ ಹಣವಲ್ಲ. ರೈತರು ಕೆಸಿಸಿ ಸಾಲ ಮರುಪಾವತಿ ಮಾಡಿದ ಹಣ ಎಂದು ವಾದಿಸಿದ್ದಾರೆ. ಆದರೆ ಆರು ವರ್ಷವಾದರೂ ಆ ರೈತರು ಯಾರು ಎಂಬ ಪಟ್ಟಿ. ರಶೀದಿ, ದಾಖಲೆಗಳನ್ನು ಇದುವರೆಗೂ ಸಂಘದ ಆಡಳಿತ ಮಂಡಳಿ ಸದಸ್ಯರ ಮುಂದೆ ಇಟ್ಟಿಲ್ಲ ಎಂದು ದೂರಿದರು.

ಜೂ.23 ರಂದು ಸಹಕಾರ ಸಂಘದ ನಿರ್ದೇಶಕರು ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಫ್ ಕೋ ಆಪರೇಟಿವ್ ಸೊಸೈಟಿ ಚಿಕ್ಕಮಗಳೂರು ವಿಭಾಗ ಇವರಿಗೆ ಸಾರ್ವಜನಿಕ ಹಣ ಭವಿಷ್ಯನಿಧಿಯಲ್ಲಿ ದುರ್ಬಳಕೆಯಾಗಿದೆ ಎಂದು ದೂರು ನೀಡಿದ್ದರೂ ಇದುವರೆಗೂ ಇದರ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ಮಾಜಿ ಅಧ್ಯಕ್ಷ ಮುದಾಬೀರ್ ಮಾತನಾಡಿ, ಸಹಕಾರ ಸಂಘದ ಮಾಜಿ ಹಾಗೂ ಹಾಲಿ ಸಿಇಒ ಅವರು ವೈಟ್ನರ್ ಬಳಸಿ ಅಕೌಂಟ್ಸ್‍ಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ ಪಿ.ಎಫ್ ಮೊತ್ತವನ್ನು ಬದಲಾಯಿಸಿದ್ದಾರೆ. ಸರ್ಕಾರವು ನಮ್ಮ ಸಂಘಕ್ಕೆ ಆಹಾರ ಸರಬರಾಜು ಉಚಿತವಾಗಿ ನೀಡಿದ್ದು, ಅದರ ಮೇಲೆ ಸಾಗಾಣಿಕೆ ಸುಂಕವನ್ನು ಅಕ್ರಮವಾಗಿ ಹಾಕಿದ್ದಾರೆ ಎಂದು ಆರೋಪಿಸಿದರು.

4.63 ಕೋಟಿ ಹಣವನ್ನು ಯಾರು ಕಟ್ಟಿದರು, ರೈತವಾರು ಪಟ್ಟಿಯನ್ನು ಕೂಡಲೇ ಸಾರ್ವಜನಿಕಗೊಳಿಸಬೇಕು. ಐಟಿ ರಿಟನ್ರ್ಸ್ ಕಟ್ಟದೇ ನೋಟೀಸ್‍ಗೆ ಉತ್ತರ ಕೊಡದೆ ಸಂಘವನ್ನು 7.29 ಕೋಟಿ ದಂಡದ ಅಪಾಯಕ್ಕೆ ದೂಡಿದ ಮಾಜಿ ಸಿಇಒ ಮತ್ತು ಹಾಲಿ ಸಿಇಒ ಅವರ ಮೇಲೆ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾ ಎ.ಆರ್ ಮತ್ತು ಡಿ.ಆರ್ ತನಿಖೆ ನಡೆಸುವುದರ ಜೊತೆಗೆ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಭವಿಷ್ಯ ನಿಧಿಯಲ್ಲಿ ಅಕ್ರಮವೆಸಗಿದ ಮಾಜಿ ಸಿಇಒ ಹಾಗೂ ಹಾಲಿ ಸಿಇಒ ಅವರನ್ನು ಕೂಡಲೇ ವಜಾ ಮಾಡಬೇಕು. ವೈಟ್ನರ್ ಹಾಕಿ ತಿದ್ದುಪಡಿ ಮಾಡಿದ ಲೆಕ್ಕವನ್ನು ಕೂಡಲೇ ತನಿಖೆ ಮಾಡಬೇಕು. ಅಕ್ರಮ ಎಸಗಿರುವ ಇವರುಗಳನ್ನು ಕಾನೂನು ಬದ್ದವಾಗಿ ತನಿಖೆ ನಡೆಸಿ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸತ್ತಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶ್ರೀನಿಧಿ, ಗಿಲ್ಲೇಶ್ ಕುಮಾರ್, ಹೇಮಂತ್ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *