ಯುವಜನತೆ ಆಂಗ್ಲಭಾಷೆಯ ವ್ಯಾಮೋಹದಲ್ಲಿ ನಮ್ಮ ನಾಡು,ನುಡಿ ಮತ್ತು ಜಾನಪದವನ್ನು ಕಡೆಗಣಿಸಬಾರದು ಎಂದು ಕಡೂರು ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ರಾಜಣ್ಣ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ಲಯನ್ಸ್ ಕ್ಲಬ್, ಬೀರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿದ್ಯಾರ್ಥಿಗಳ ನಡಿಗೆ ನಾಡು,ನುಡಿ ಮತ್ತು ಜಾನಪದದೆಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಾಡು, ನಮ್ಮಮಾತೃಭಾಷೆ ಕನ್ನಡ ಮತ್ತು ಜಾನಪದ ನಮಗೆ ಹೆತ್ತ ತಾಯಿ ಯಿದ್ದಂತೆ ಹಾಗಾಗಿ ನಾವು ನಾಡು,ನುಡಿ ಮತ್ತು ಜಾನಪದವನ್ನು ಮರೆತರೆ ಹೆತ್ತ ತಾಯಿಯನ್ನೇ ಮರೆತಂತೆ ಎಂದರು.
ಕನ್ನಡ ಭಾಷೆ ಮತ್ತು ಜಾನಪದ ನಮ್ಮ ಉಸಿರು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಜಾನಪದ ನಮ್ಮ ಕಲೆ, ಸಾಹಿತ್ಯ, ಸಂಗೀತ, ಸಂಸ್ಕಾರ, ಸಂಸ್ಕøತಿ, ಆಚಾರ, ವಿಚಾರಗಳ ಮೂಲ ಬೇರು, ಅದನ್ನು ನಾವು ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಲ್ಲಿ ಕಳೆದುಕೊಂಡರೆ ಜಗತ್ತಿನೆದುರು ಒಂಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾಹಿತಿ ಮೇಕನಗದ್ದೆ ಲಕ್ಷ್ಮಣಗೌಡ ಮಾತನಾಡಿ ಕನ್ನಡ ನಾಡು,ನುಡಿ ಮತ್ತು ಜಾನಪದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಒಂದನ್ನು ಬಿಟ್ಟು ಮತ್ತೊಂದು ಇರಲಾರವು, ಇವು ಭಾರತೀಯ ಸಂಸ್ಕೃತಿಯ ಆಧಾರ ಸ್ತಂಭ ಗಳಾಗಿವೆ, ಹಾಗಾಗಿ ಯುವಜನತೆ ಕನ್ನಡ ಮತ್ತು ಜಾನಪದವನ್ನು ತಾವು ಬಳಸುವುದರ ಜೊತೆಗೆ ಅನ್ಯ ಭಾಷಿ ಗರಿಗೂ ಕಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ನಾಡು-ನುಡಿ ಮತ್ತು ಜಾನಪದದ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವ ಜನತೆಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ತಿಂಗಳೂ ಜಿಲ್ಲೆಯ ಒಂದೊಂದು ಶಾಲಾ ಕಾಲೇಜಿನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳು ಮತ್ತು ಯುವ ಜನತೆ ನಾಡು-ನುಡಿ ಮತ್ತು ಜಾನಪದವನ್ನು ಪ್ರೀತಿಸಿದರೆ, ಅವುಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಅವು ಮುಂದಿನ ತಲೆಮಾರಿನವರೆಗೆ ಜೀವಂತವಾಗಿರುತ್ತವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ,ಹರೀಶ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಮತ್ತು ಯುವಜನತೆ ನಮ್ಮ ನಾಡು,ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಡೂರು ತಾಲೂಕು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಯಗಟಿ ಜಗದೀಶ್ವರಾಚಾರ್ ಮಾತನಾಡಿ ಕನ್ನಡ ನಾಡು,ನುಡಿ ಮತ್ತು ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲೂ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಮಲ್ಲಿಗೆ ಬಳಗದ ಗಾಯಕಿ ಮಂಜುಳಾ ಮತ್ತು ತಂಡದವರು ವಿದ್ಯಾರ್ಥಿಗಳಿಗೆ ಜಾನಪದ ಗೀತೆಗಳ ಗಾಯನ ತರಬೇತಿ ನೀಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸವಿತಾ ಸತ್ಯನಾರಾಯಣ, ಸಂಚಾಲಕಿ ಗಾಯತ್ರಮ್ಮ, ಸಹ ಕಾರ್ಯದರ್ಶಿಗಳಾದ ನಾರಾಯಣಪುರ ರವಿ, ಮಲಿಯಪ್ಪ, ಮೂಕಾಂಬಿಕಾ,ಬೋರೇಶ್, ಉಪನ್ಯಾಸಕರಾದ ಸಂದೀಪ್, ಪ್ರಸಾದ್, ಉಪಸಿತರಿದ್ದರು.


