ರಾಜ್ಯ ಚುನಾವಣಾ ಆಯೋಗ ಜಿ.ಪಂ. ಹಾಗೂ ತಾ.ಪಂ. ಮೀಸಲು ಕರಡು ಪಟ್ಟಿ ಪ್ರಕಟ ಮಡಿದ್ದು, ಮೂಡಿಗೆರೆ ತಾಲೂಕಿನಲ್ಲಿ ಬಿಸಿಎಂ ಎ ಕ್ಯಾಟಗರಿಗೆ ಒಂದೇ ಒಂದು ಸ್ಥಾನ ನೀಡದೇ ರಾಜ್ಯ ಸರ್ಕಾರ ಅಲ್ಪಸಂಖ್ಯಾತರಿಗೆ ದ್ರೋಹ ಎಸಗಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಝಕರಿಯಾ ಝಾಕಿರ್ ದೂರಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 50 ವರ್ಷ ಇತಿಹಾಸದಲ್ಲಿ ಬಿಸಿಎಂ (ಎ) ಮೀಸಲಾತಿ ಇಲ್ಲದೇ ತಾಲೂಕಿನಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗಳೆ ನಡೆದಿಲ್ಲ. ಆದರೆ ಈ ಬಾರಿ ತಾಲೂಕಿನಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಬಿಸಿಎಂ ಎ ಅಡಿಯಲ್ಲಿ ಬರುವ ಅಲ್ಪಸಂಖ್ಯಾತರು ಸೇರಿದಂತೆ ಇತರೆ ಸಮುದಾಯಕ್ಕೆ ಯಾವುದೇ ಸ್ಥಾನಮಾನ ನೀಡಿಲ್ಲ. ಇದು ಕೇವಲ ಮೂಡಿಗೆರೆ ಮಾತ್ರವಲ್ಲ ತರಿಕೆರೆ, ಕೊಪ್ಪ ತಾಲೂಕಿನಲ್ಲಿಯೂ ತಾ.ಪಂ. ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿಲ್ಲ. ಇದನ್ನು ಜೆಡಿಎಸ್ ಅಲ್ಪ ಸಂಖ್ಯಾತರ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಶೇ.95 ರಷ್ಟು ಮುಸ್ಲೀಮರ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಹಾಗೂ ಸ್ಥಳೀಯ ಶಾಸಕರು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ. ಇದರ ಭಾಗವಾಗಿ ಮುಸ್ಲೀಮರು ರಾಜಕೀಯವಾಗಿ ಮುಂದೆ ಬರಬಾರದೆಂಬ ದೃಷ್ಟಿಯಿಂದ ರಾಜ್ಯ ಸರಕಾರ ಚುನಾವಣೆ ಆಯೋಗದ ಮೇಲೆ ಒತ್ತಡ ಹಾಕಿ ಅಲ್ಪಸಂಖ್ಯಾತರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಪಿತೂರಿ ಮಾಡಿದೆ.
ಈ ಬಗ್ಗೆ ನಾವು ಆಕ್ಷೇಪಣೆ ಸಲ್ಲಿಸುವುದಿಲ್ಲ. ಬದಲಾಗಿ ನಮ್ಮ ಹಕ್ಕು ಪಡೆಯಲು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಲಾಗಿದೆ. ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿರುವ ಮುಸ್ಲಿಮರಿಗೆ ನಿಜವಾಗಿಯೂ ಸಮುದಾಯದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಈ ಬಗ್ಗೆ ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಸುರೇಶ್ ಮಾಕೋನಹಳ್ಳಿ, ಅಲ್ಪಸಂಖ್ಯಾತರ ಘಟಕದ ಕ್ಷೇತ್ರಾಧ್ಯಕ್ಷ ಶಬ್ಬೀರ್ ಅಹಮ್ಮದ್, ನಗರ ಯುವ ಘಟಕದ ಅಧ್ಯಕ್ಷ ಫಯಾಜ್, ಜೋಹರ್, ಅಣ್ಣಪ್ಪಗೌಡ ಉಪಸ್ಥಿತರಿದ್ದರು.


