ಮಲೆನಾಡಿನಲ್ಲಿ ಮ್ಯಾರಥಾನ್ ಓಟ ಮತ್ತು ಸೈಕ್ಲಿಂಗ್ ಕ್ರೀಡೆಗಳನ್ನು ಆಯೋಜಿಸುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದರ ಜತೆಗೆ, ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಸಹಕಾರಿಯಾಗುತ್ತದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಮೂಡಿಗೆರೆ ಪಟ್ಟಣದಲ್ಲಿ ಭಾನುವಾರ ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಮುದ್ರೆಮನೆ ಚಿಕ್ಕಮಗಳೂರು ವೈಲ್ಡರ್‍ನೆಸ್ ರಾಷ್ಟ್ರಮಟ್ಟದ ಮ್ಯಾರಥಾನ್ ಮತ್ತು ಸೈಕ್ಲಿಂಗ್–2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮ್ಯಾರಥಾನ್ ಓಟ ಮತ್ತು ಸೈಕ್ಲಿಂಗ್ ದೈಹಿಕ ಆರೋಗ್ಯವನ್ನು ವೃದ್ಧಿಸುವ ಪ್ರಮುಖ ಕ್ರೀಡೆಗಳಾಗಿವೆ. ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ಈ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶವಿರುವುದರಿಂದ ಇವುಗಳಿಗೆ ಹೆಚ್ಚಿನ ಮಹತ್ವವಿದೆ. ಇಂತಹ ಕ್ರೀಡಾಕೂಟಗಳು ಜನರಲ್ಲಿ ವ್ಯಾಯಾಮದ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡುತ್ತವೆ ಎಂದರು.
ಚಿಕ್ಕಮಗಳೂರು ಜಿಲ್ಲೆ ಮಲೆನಾಡಿನ ಹಸಿರು ಪರಿಸರ, ಬೆಟ್ಟಗುಡ್ಡಗಳು ಹಾಗೂ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೊರರಾಜ್ಯಗಳು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಮಲೆನಾಡಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ 2ರಿಂದ 42 ಕಿ.ಮೀ.ವರೆಗಿನ ವಿವಿಧ ವಿಭಾಗಗಳ ಮ್ಯಾರಥಾನ್ ಆಯೋಜಿಸಲಾಗಿತ್ತು.
ಮ್ಯಾರಥಾನ್ ಓಟದಲ್ಲಿ ರಾಷ್ಟ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದ ಸಾವಿರಾರು ಮಂದಿ ಭಾಗವಹಿಸಿದರು. ಸೈಕ್ಲಿಂಗ್‍ನ ಐಟಿಟಿ ಹಾಗೂ ಫನ್ ರೈಡ್ ವಿಭಾಗಗಳಲ್ಲಿ ನೂರಾರು ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅಲ್ಲದೇ ಫನ್ ರೈಡ್ ವಿಭಾಗದಲ್ಲಿ ಸ್ಪರ್ಧಾತ್ಮಕ ಒತ್ತಡವಿಲ್ಲದೆ ಸೈಕ್ಲಿಂಗ್‍ನ ಆನಂದವನ್ನು ಅನುಭವಿಸುತ್ತಾ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಅವಕಾಶ ಕಲ್ಪಿಸಲಾಗಿತ್ತು.
ಕ್ರೀಡಾಕೂಟವು ಕೇವಲ ಸ್ಪರ್ಧೆಗೆ ಸೀಮಿತವಾಗದೆ, ಆರೋಗ್ಯ ಜಾಗೃತಿ ಮೂಡಿಸುವುದರ ಜತೆಗೆ ಮೂಡಿಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೂ ಪೂರಕವಾಯಿತು.
ಸ್ಪರ್ಧೆ ಮೂಡಿಗೆರ ಕಾಫಿ ಕೋರ್ಟ್ ನಿಂದ ಪ್ರಾರಂಭಿಸಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಾಗಿ ಮೂಡಿಗೆರೆ ಮಾನ್ಸಿ ಎನ್ಕ್ಲೇವ್ ಮೂಲಕ ಸಾಗಿ ಕೊನೆಗೆ ಕಾಫಿ ಕೋರ್ಟ್ ನಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.



