ಮೂಡಿಗೆರೆ ಪ.ಪಂ. ವ್ಯಾಪ್ತಿಯ ಎಲ್ಲಾ ರಸ್ತೆಗಳಲ್ಲಿ ಅಮೃತ್ ಯೋಜನೆಗಾಗಿ ಪೈಪ್‍ಲೈನ್ ಅಳವಡಿಸಲು ತೋಡಿರುವ ಗುಂಡಿಗಳನ್ನು ಮುಚ್ಚಲು ಪ.ಪಂ. ಕೂಡಲೇ ಕ್ರಮ ವಹಿಸಬೇಕೆಂದು ದಿಶಾ ಸಮಿತಿ ಸದಸ್ಯ ಹಳೆಕೋಟೆ ಮನೋಜ್ ಒತ್ತಾಯಿಸಿದ್ದಾರೆ.

ಮಂಗಳವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ಅಮೃತ್ ಯೋಜನೆಯಡಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಪೈಪ್‍ಲೈನ್ ಅಳವಡಿಸಲು ಗುಂಡಿಗಳನ್ನು ತೆಗೆದು ತಿಂಗಳುಗಳೆ ಕಳೆದಿವೆ. ಇದರಿಂದ ವಾಹನ ಸಂಚರಿಸಲು ತೀವ್ರ ತೊಂದರೆ ಉಂಟಾಗುತ್ತಿದೆ. ಕಳೆದ ತಿಂಗಳು ನಡೆದ ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಿದಾಗ, 1 ವಾರದೊಳಗೆ ಎಲ್ಲಾ ಗುಂಡಿಗಳನ್ನು ಸಿಮೆಂಟ್‍ನಿಂದ ಮುಚ್ಚಿ ಸರಿಪಡಿಸುವುದಾಗಿ ಸಂಬಂಧಿಸಿದ್ದ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಕೆಲವೇ ಮೂರ್ನಾಲ್ಕು ರಸ್ತೆಗಳಲ್ಲಿ ಮಾತ್ರ ಗುಂಡಿಗಳನ್ನು ಮುಚ್ಚಿಸಿದ್ದಾರೆ. ಅದನ್ನು ಕಳಪೆ ಕಾಮಗಾರಿ ಮಾಡಿದ್ದರಿಂದ ಇದೀಗ ಸಿಮೆಂಟ್ ಕಿತ್ತುಬರುತ್ತಿದೆ. ಇನ್ನೂ ಅನೇಕ ರಸ್ತೆಗಳಲ್ಲಿರುವ ಗುಂಡಿಗಳನ್ನು ಇದೂವರೆಗೂ ಮುಚ್ಚಿಸಿಲ್ಲ. ಕೂಡಲೇ ಎಲ್ಲಾ ಗುಂಡಿಗಳನ್ನು ಮುಚ್ಚಿಸಿ ಗುಣಮಟ್ಟದ ಕಾಮಗಾರಿ ನಡೆಸಬೇಕು. ಇಲ್ಲವಾದರೆ ಇಲ್ಲದಿದ್ದರೆ ಗುತ್ತಿಗೆದಾರರು ಹಾಗೂ ಇಂಜಿನಿಯರ್ ವಿರುದ್ಧ ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.


